ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿದ್ದದ್ದು ಕುದಿಯುತ್ತಿರುವ ಹುಗ್ಗಿ. ಆ ಹುಗ್ಗಿಗೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ಐದು ಬಾರಿ ಕೈ ಹಾಕಿ ಹುಗ್ಗಿಯನ್ನು ತೆಗೆದು ಪ್ರದರ್ಶಿಸಿದರು. ಒಬ್ಬರಲ್ಲ ಇಬ್ಬರಲ್ಲ ಪಲ್ಲಕ್ಕಿ ಹೊತ್ತಿದ್ದ ಹತ್ತಾರು ಪೂಜಾರಿಗಳು ಅಳುಕಿಲ್ಲದೆ ಹೀಗೆ ಮಾಡುತ್ತ ನೋಡುಗರನ್ನು ಬೆರಗಾಗಿಸಿದರು.

ದೇವರ ಪವಾಡವೆಂದೆ ಕರೆಸಿಕೊಳ್ಳುವ ಇಂತಹದೊಂದು ಅಪರೂಪದ ಪ್ರಕ್ರಿಯೆ ಸಮೀಪದ ಗೋವಿಂದಕೊಪ್ಪದಲ್ಲಿ ಬುಧವಾರ ನಡೆಯಿತು. ಸ್ಥಳೀಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಅನೇಕ ವರ್ಷಗಳಿಂದಲೂ ಇದು ನಡೆಯುತ್ತಿದೆ.

ವಾಡಿಕೆಯಂತೆ ಪೂಜಾರರು ಕುದಿಯುವ ಹುಗ್ಗಿಯಲ್ಲಿ ಕೈಯನ್ನು ಹಾಕಿ ನೈವೇದ್ಯಕ್ಕೆ ಐದು ಬಾರಿ ತೆಗೆದರೂ ಕೈ ಒಂದಿಷ್ಟು ಸುಡದಿರುವುದು ಅಚ್ಚರಿಗೆ ಹಾಗೂ ದೈವದ ಮೇಲಿನ ನಂಬಿಕೆಗೆ ಸಾಕ್ಷಿಯಾಯಿತು.

ಇದಕ್ಕೂ ಮೊದಲು ಡೊಳ್ಳಿನ ವಾಲಗದೊಂದಿಗೆ ಅನವಾಲ, ಸೊಪಡ್ಲಾ, ಬೂದಿಹಾಳ ಸೇರಿ ಸುತ್ತಮುತ್ತಲಿನ ಊರುಗಳಿಂದ ಬಂದಿದ್ದ ಇಪ್ಪತ್ತಕ್ಕೂ ಅಧಿಕ ಪಲ್ಲಕ್ಕಿಗಳ ಉತ್ಸವ ಗ್ರಾಮದಲ್ಲಿ ಸಂಭ್ರಮದಿಂದ ನೆರವೇರಿತು.