ಹಾಲು ಹಿಂಡುವ 3 ದಿನದ ಆಡಿನ ಮರಿ!

ಕಲಾದಗಿ: ಯಾವುದೇ ಪ್ರಾಣಿ ಪ್ರಸವದ ನಂತರ ಹಾಲು ಕೊಡುವುದು ಸಾಮಾನ್ಯ. ಆದರೆ, ಇಲ್ಲೊಂದು ಆಡಿನ ಮರಿ ಹುಟ್ಟಿದ ಮೂರೇ ದಿನದಲ್ಲಿ ಹಾಲು ಕೊಡುವ ಮೂಲಕ ಪಶುವೈದ್ಯ ಲೋಕವೇ ಅಚ್ಚರಿ ಪಡುವಂತೆ ಮಾಡಿದೆ!

ಹೌದು, ಸಮೀಪದ ತುಳಸಿಗೇರಿಯ ಹನುಮಂತ ದಾಸನ್ನವರ ಅವರ ಮನೆಯಲ್ಲಿ ವಾರದ ಹಿಂದೆ ಜನಿಸಿರುವ ಆಡಿನ ಮರಿ ಇಂತಹದೊಂದು ಅಚ್ಚರಿಗೆ ಕಾರಣವಾಗಿದೆ.

ಹನುಮಂತ ಅವರ ಮನೆಯಲ್ಲಿ ಮೇ 10ರಂದು ಈ ಮರಿ ಜನಿಸಿದ್ದು, ಜನಿಸಿದ ಮೂರನೆಯ ದಿನದಲ್ಲಿ ಅದರ ಮೊಲೆಯಲ್ಲಿ ಹಾಲು ಬರುವುದನ್ನು ಮನೆಯವರು ಗಮನಿಸಿದ್ದಾರೆ. ಅಂದಿನಿಂದ ಇವತ್ತಿನವರೆಗೂ ಅದು ನಿತ್ಯ ಒಂದು ಕಪ್‌ನಷ್ಟು ಹಾಲು ನೀಡುತ್ತಿದೆ.

ಹಾರ್ಮೋನ್‌ಗಳ ವ್ಯತ್ಯಾಸದಿಂದ ಹೀಗಾಗುವ ಸಾಧ್ಯತೆಗಳಿರುತ್ತವೆ. ಹುಟ್ಟಿದ ಮೂರೇ ದಿನದಲ್ಲಿ ಈ ರೀತಿಯಾಗುವುದು, ಇಲ್ಲಿವರೆಗೂ ಹಾಲು ಕೊಡುವುದನ್ನು ಮುಂದುವರಿಸಿರುವುದು ನಿಜಕ್ಕೂ ಬಹಳ ಅಪರೂಪ. ಇದು ಪಶು ವೈದ್ಯಕೀಯ ವಿಜ್ಞಾನದ ವಿಸ್ಮಯ.
ಡಾ. ಆರ್.ಎಸ್. ಪದ್ರಾ, ಬಾಗಲಕೋಟೆ ತಾಲೂಕು ಪಶು ವೈದ್ಯಾಧಿಕಾರಿ