ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಕಲಾದಗಿ: ಗ್ರಾಮದಲ್ಲಿ 16ರಿಂದ ಮೂರು ದಿನ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮಹಾ ಸಮ್ಮೇಳನ ‘ತಬಲೀಗ ಇಜ್ತೆಮಾ’ ಹಿನ್ನೆಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲಾದಗಿ ಸೇರಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಬೀಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಬುಧವಾರ ಸಂಜೆಯಿಂದಲೇ ಪೊಲೀಸ್ ಸರ್ಪಗಾವಲು ಕಂಡುಬರುತ್ತಿದೆ.

ಜಿಲ್ಲೆ, ಬೇರೆ ಜಿಲ್ಲೆ, ಹೊರ ರಾಜ್ಯ, ದೇಶ, ವಿದೇಶಗಳಿಂದ ಲಕ್ಷಾಂತರ ಜನರು ಹಾಗೂ ಪ್ರಮುಖ ಮುಸ್ಲಿಂ ಧಾರ್ಮಿಕ ಧರ್ಮಗುರುಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ‘ಜಿರೋ ಟಾಲರನ್’ ವ್ಯವಸ್ಥೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಜಿಲ್ಲೆಯ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದ ಈ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಜನರ ಹಾಗೂ ವಾಹನಗಳ ತೀವ್ರ ತಪಾಸಣೆ ನಡೆಯಲಿದೆ. ಶಾಂತಿಗೆ ಭಂಗ ತರುವಂತವರು, ಯಾವುದೇ ವಸ್ತು ಹಾಗೂ ವ್ಯಕ್ತಿ ಒಳಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ.

ಡ್ರೋಣ್ ಕಣ್ಗಾವಲು
ಕಾರ್ಯಕ್ರಮ ನಡೆವ ಸ್ಥಳದಲ್ಲಿ, ಪಾರ್ಕಿಂಗ್ ಜಾಗದಲ್ಲಿ ಹಾಗೂ ಪ್ರಮುಖ ಕಡೆಗಳಲ್ಲಿ ಸಿಸಿ ಕ್ಯಾಮರಾಗಳು ನಿರಂತರ ಕಾರ್ಯಾಚರಿಸಲಿವೆ. ವಿಡಿಯೋ ರೆಕಾರ್ಡಿಂಗ್ ಸಹ ಮಾಡಲಾಗುತ್ತಿದೆ. ಬಹು ಮುಖ್ಯವಾಗಿ ಪೊಲೀಸ್ ಇಲಾಖೆಯ 4 ಡ್ರೋಣ್ ಕ್ಯಾಮರಾಗಳು ಹಾರಾಡುತ್ತ ಹದ್ದಿನ ಕಣ್ಣಿಡಲಿವೆ. ವಿದೇಶಿಯರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಲು ಮುಂದಾಗಿದೆ.

ಕಂಟ್ರೋಲ್ ರೂಂ
ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ತುರ್ತು ಅವಶ್ಯಕತೆಗಳಿಗೆ ತಕ್ಷಣವೇ ಸ್ಪಂದಿಸಲು ಪೊಲೀಸ್ ಇಲಾಖೆಯ ತಾತ್ಕಾಲಿಕ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಕೆಲಸಗಳಿಗೆ ಈ ಕಂಟ್ರೋಲ್ ರೂಂ ಸಹಾಯವಾಣಿ ದೂರವಾಣಿ ಸಂಖ್ಯೆ ಶುಕ್ರವಾರ ಬೆಳಗ್ಗೆ ಲಭ್ಯವಾಗಲಿದೆ.

ಇಷ್ಟೆಲ್ಲ ಸಿಬ್ಬಂದಿ ಆಯೋಜನೆ
5 ಜನ ಎಸ್ಪಿ, 9 ಜನ ಎಎಸ್ಪಿ, 12 ಜನ ಡಿವೈಎಸ್ಪಿ, 35 ಸಿಪಿಐ, 128 ಪಿಎಸೈ, 240 ಎಎಸ್‌ಐ, 1600 ಎಚ್‌ಸಿ ಪಿಸಿ, 1100 ಹೋಮ್ ಗಾರ್ಡ್ಸ್, 20 ಕೆಎಸ್‌ಆರ್‌ಪಿ, 10 ಡಿಆರ್, 2 ಆರ್‌ಎಎ್ ತುಕಡಿ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ. ಒಟ್ಟಾರೆ ಕಾರ್ಯಕ್ರಮ ಸ್ಥಳ ಒಳಗೊಂಡಂತೆ ಇಡೀ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೇವಲ ಕಾರ್ಯಕ್ರಮ ನಡೆಯುವ ಸ್ಥಳದಲ್ಲಷ್ಟೆ ಅಲ್ಲ ಇಡೀ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಸಾರ್ವಜನಿಕರು ಯಾವುದೇ ರೀತಿಯ ವದಂತಿಗೂ ಗಮ ಕೊಡದೆ ಶಾಂತಿ ಸುವ್ಯಸ್ಥೆಗೆ ನಮ್ಮೊಂದಿಗೆ ಕೈಜೋಡಿಸಬೇಕು.
ಸಿ.ಬಿ. ರಿಷ್ಯಂತ, ಪೊಲೀಸ್ ವರಿಷ್ಠಾಧಿಕಾರಿ ಬಾಗಲಕೋಟೆ