ಘಟಪ್ರಭೆ ಹೊಡೆತಕ್ಕೆ ಕೊಚ್ಚಿಹೋದ ರಸ್ತೆ

ಕಲಾದಗಿ: ಮುಧೋಳ-ಬಾಗಲಕೋಟೆ ತಾಲೂಕಿನ ಹಲವಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಕಲಾದಗಿ-ಕಾತರಕಿ ಸೇತುವೆಯ ಏರು ರಸ್ತೆ ಘಟಪ್ರಭಾ ನದಿ ಆರ್ಭಟಕ್ಕೆ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಅಂಕಲಗಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕಲಾದಗಿ ಹಾಗೂ ಕಾತರಕಿ ಭಾಗ ಹಾಗೂ ಮುಧೋಳ, ಜಮಖಂಡಿ ಭಾಗಗಳಿಗೆ ಸಮೀಪದ ಮಾರ್ಗವಾಗಿತ್ತು. ಕೂಗಳತೆಯ ದಾರಿ ಸಂಪರ್ಕ ಕಡಿತಗೊಂಡಿರುವುದರಿಂದ ಈಗ 30 ಕಿ.ಮೀ. ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ನದಿ ನೀರಿನ ರಭಸಕ್ಕೆ ಸಿಲುಕಿ ರಸ್ತೆ ಗುರುತು ಸಿಗಲಾರದಂತಹ ಸ್ಥಿತಿಗೆ ತಲುಪಿದೆ. ಸೇತುವೆ ಸಮೀಪದ 400 ಮೀ. ರಸ್ತೆ ಹಾಗೂ 100 ಮೀ. ಏರು ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಆಳೆತ್ತರದ ಗುಂಡಿ ಬಿದ್ದಿವೆ. ರಸ್ತೆಯನ್ನು ಶೀಘ್ರ ರಸ್ತೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾತರಕಿ ಭಾಗದಿಂದ ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ ಕಡೆಗೆ ಹೋಗಲು ಕಲಾದಗಿ ಭಾಗದಿಂದ ಮುಧೋಳ, ಜಮಖಂಡಿ , ಗಲಗಲಿ ಕಡೆಗೆ ಹೋಗಿ ಬರಲು ಈ ರಸ್ತೆ ಬಹಳ ಸಮೀಪವಾಗಿತ್ತು. ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
– ರಮೇಶ ದೇವರೆಡ್ಡಿ ಅಂಕಲಗಿ ಯುವ ಮುಖಂಡ

ಸೇತುವೆಯ ಏರು ರಸ್ತೆ ಕೊಚ್ಚಿಹೋಗಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಿದ್ದು, ಸಣ್ಣ ನೀರಾವರಿ ಇಲಾಖೆ ರಾಜ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಆ. 20ರಂದು ಬೆಳಗಾವಿಯಲ್ಲಿ ನಡೆಸಲಿರುವ ಸಭೆಯಲ್ಲಿ ದುರಸ್ತಿ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
– ಎಸ್.ಎಸ್. ಸಾವನ್ ಎಇಇ ಸಣ್ಣ ನೀರಾವರಿ ಇಲಾಖೆ ಬಾಗಲಕೋಟೆ

ರಸ್ತೆ ಹಾಳಾಗಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ. ಒಂದೆರಡು ದಿನದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್ ಸಭೆ ನಡೆಸಿ ರಸ್ತೆ ದುರಸ್ತಿ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಆದಷ್ಟು ಬೇಗ ಕೆಲಸ ಮಾಡಿ ರಸ್ತೆ ಸಂಚಾರಕ್ಕೆ ಮುಕ್ತಮಾಡಲಾಗುವುದು.
– ದಯಾನಂದ ಎಇಇ ಪಿಡಬ್ಲ್ಯುಡಿ ಬಾಗಲಕೋಟೆ

Leave a Reply

Your email address will not be published. Required fields are marked *