ಬಡೆ ಇಜ್ತೆಮಾ ಕಾರ್ಯಕ್ರಮಕ್ಕೆ ಶ್ರೀಗಳ ಬೆಂಬಲ

ಕಲಾದಗಿ: ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ ಭಾವೈಕ್ಯದ ಮಠ. ಮಠಕ್ಕೆ ಧರ್ಮಾತೀತರಾಗಿ ಎಲ್ಲರೂ ನಡೆದುಕೊಳ್ಳುತ್ತಾರೆ. ಅದರಲ್ಲೂ ಮುಸ್ಲಿಮರಿಗೂ ಮಠಕ್ಕೂ ಅನ್ಯೋನ್ಯ ಸಂಬಂಧವಿದೆ. ಈ ಹಿನ್ನೆಲೆ ಕಲಾದಗಿಯಲ್ಲಿ ನಡೆಯುತ್ತಿರುವ ಇಜ್ತೆಮಾಕ್ಕೆ ಶುಭ ಹಾರೈಸಲು, ಅವರಿಗೆ ಬೆಂಬಲ ನೀಡಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಮಹಾಲಿಂಗಪುರದ ಮಹಾಲಿಂಗೇಶ್ವರ ಸಂಸ್ಥಾನಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಫೆ.16ರಿಂದ ನಡೆಯಲಿರುವ ಮುಸ್ಲಿಮರ ಧಾರ್ಮಿಕ ಸಮ್ಮೇಳನ ಇಜ್ತೆಮಾ ಸ್ಥಳಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಸಿದ್ಧತೆ ಪರೀಶಿಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಧರ್ಮ ಬೇರೆ ಇರಬಹುದು, ದೇವರ ಹೆಸರುಗಳು ಬೇರೆ ಇರಬಹುದು, ಆದರೆ, ಎಲ್ಲರಿಗೂ ದೇವರು ಒಬ್ಬನೆ. ಭಾರತೀಯರೆಲ್ಲ ಒಂದೆ. ಈ ಸದ್ಭಾವನೆಯೇ ಮಹಾಲಿಂಗೇಶ್ವರ ಮಠದ ಪರಂಪರೆಯಾಗಿದ್ದು, ಅಂತಹ ಶ್ರೇಷ್ಠ ಸದ್ಭಾವನೆ ಎಲ್ಲಡೆ ಬೆಳೆಯಬೇಕೆಂಬ ಆಶಯ ನಮ್ಮದು ಎಂದರು.

ಮಹಾಲಿಂಗಪುರ ಅಂಜುಮನ್ ಕಮಿಟಿ ಅಧ್ಯಕ್ಷ ಸಜ್ಜನ್ನ ಪೆಂಡಾರಿ, ಜಯಕರ್ನಾಟಕ ಸಂಘಟನೆಯ ಆರ್.ಡಿ. ಬಾಬು, ಮುಖಂಡರಾದ ಎಂ.ಬಿ. ಸೌದಾಗರ, ಅಜೀಜ್ ಬಾಳೀಕಾಯಿ, ಬಂದೇನವಾಜ್ ಸೌದಾಗರ, ಯಾಸೀನ್ ಮೋಮೀನ್, ಹಾಶಿಂಪೀರ್ ಮಕಾನದಾರ, ನಮೀಸಾಬ ಯಕ್ಸಾಂಬಿ, ರಾಜು ಬೆಳಗಾಂವಕರ ಇತರರಿದ್ದರು.