ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ

ಕಲಾದಗಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸುಳ್ಳು ಭರವಸೆಗಳಿಗೆ ಮರುಳಾಗಿ ಜನರು ಮತ ನೀಡಿ ಪ್ರಧಾನಿಯನ್ನಾಗಿ ಮಾಡಿದ್ದರು. ಆದರೆ, ಇಂದು ಎಲ್ಲ ಮತದಾರರಿಗೆ ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎಂದು ಗೊತ್ತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರವಾಗಿ ಗ್ರಾಮದಲ್ಲಿ ನಡೆದ ರೋಡ್ ಶೋದಲ್ಲಿ ಅವರು ಮಾತನಾಡಿದರು. 15 ವರ್ಷ ಸಂಸದರಾಗಿರುವ ಪಿ.ಸಿ. ಗದ್ದಿಗೌಡರರು ಜಿಲ್ಲೆಗೆ ನೀಡಿದ ಅಭಿವೃದ್ಧಿ ಶೂನ್ಯವಾಗಿದೆ. ವೀಣಾ ಕಾಶಪ್ಪನವರ ಅವರನ್ನು ಆಯ್ಕೆ ಮಾಡಿ ಅವರು ಕೆಲಸ ಮಾಡಿ ತೋರಿಸುತ್ತಾರೆ ಎಂದು ಹೇಳಿದರು.

ವೀಣಾ ಕಾಶಪ್ಪನವರ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆ ಶೂನ್ಯವಾಗಿದೆ. ನಾನು ನಿಮ್ಮ ಮನೆ ಮಗಳು. ನನಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಶಾಸಕ ಜೆ.ಟಿ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ ಮಾತನಾಡಿದರು.

ಬೃಹತ್ ರೋಡ್ ಶೋ
ಹಜರತ್ ನೂರ ಅಲಿ ಶಾ ಬಾಬಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಗ್ರಾಮದಲ್ಲಿ ರೋಡ್ ಶೋ ಆರಂಭಗೊಂಡು ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು.