ನೀರು ತಡೆಯಲು ರೈತರ ಹರಸಾಹಸ

ಕಲಾದಗಿ: ಸಮೀಪದ ಕಾತರಕಿ-ಕಲಾದಗಿ ಬ್ಯಾರೇಜ್‌ಗೆ ಹಿಡಕಲ್ ಜಲಾಶಯದಿಂದ ನೀರು ಹರಿದು ಬರುತ್ತಿದ್ದು, ಗೇಟ್‌ಗಳಿಂದ ಸೋರಿಹೋಗುತ್ತಿರುವ ನೀರನ್ನು ತಡೆಯಲು ರೈತರು ಶುಕ್ರವಾರ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದರು.

ಹೋರಾಟ ಮಾಡಿ ಬಿಡುಗಡೆ ಮಾಡಿಸಿಕೊಂಡಿರುವ ನೀರು ಸೋರುತ್ತಿರುವ ಬ್ಯಾರೇಜ್‌ನ ಗೇಟ್‌ಗಳ ಮೂಲಕ ಕೆಳ ಭಾಗಕ್ಕೆ ಹರಿದು ಹೋಗುತ್ತಿದ್ದು ರೈತರಲ್ಲಿ ಆತಂಕ ಉಂಟು ಮಾಡಿದೆ.

ರೈತರು ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿಯೊಂದಿಗೆ ಸೋರುತ್ತಿರುವ ಗೇಟ್‌ಗಳನ್ನು ಮುಚ್ಚಲು ಮುಂದಾಗಿ ಅನೇಕ ಗಂಟೆ ಹೈರಾಣಾಗಬೇಕಾಯಿತು. ಮೂರ‌್ನಾಲ್ಕು ಗಂಟೆ ಕಾರ್ಯಚರಣೆ ನಡೆದು ಒಂದಿಷ್ಟು ಯಶಸ್ಸು ದೊರೆಯಿತು.

ಸೋರುತ್ತಿದ್ದ ಗೇಟ್‌ಗಳನ್ನು ಜೆಸಿಬಿ ನೆರವಿನಿಂದ ತೆಗೆದು ನೀರು ಸೋರದಂತೆ ಮತ್ತೆ ಕೂಡಿಸಲಾಯಿತು.ಉಸುಕು ತುಂಬಿದ ಚೀಲಗಳನ್ನು ಹಗ್ಗಗಳ ಮೂಲಕ ಗೇಟ್‌ನ ಬಾಯಿಗೆ ಇಳಿಸುವುದರ ಮೂಲಕ ಸೋರುವಿಕೆ ತಡೆಯಲಾಯಿತು.