
ಕಲಾದಗಿ: ಜಾಕ್‌ವೆಲ್ ನಿರ್ಮಾಣಕ್ಕೆ ನೆಲ ಸ್ಫೋಟಿಸಿದ ಪರಿಣಾಮ ಗ್ರಾಮದ ದಂಡಿನ ಕುರುಬರ ಓಣಿಯಲ್ಲಿ ಬುಧವಾರ ಬೆಳಗ್ಗೆ ಬೃಹತ್ ಕಲ್ಲೊಂದು ಹಾರಿಬಂದು ಬಿದ್ದಿದೆ.
ಗ್ರಾಮದ ಶೆಲ್ಲಿಕೇರಿ ಕ್ರಾಸ್ ಬಳಿ ಹೆರಕಲ್ ದಕ್ಷಿಣ ವಿಸ್ತರಣಾ ಏತ ನೀರಾವರಿ ಯೋಜನೆಗಾಗಿ ಜಾಕ್‌ವೆಲ್ ನಿರ್ಮಾಣದ ಕಾಮಗಾರಿ ಕೆಲ ತಿಂಗಳಿಂದ ನಡೆದಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕಲ್ಲು ಒಡೆಯಲು ಸ್ಫೋಟ ಮಾಡಿದಾಗ ಆ ಸ್ಫೋಟಕ್ಕೆ ಬೃಹತ್ ಕಲ್ಲು ಸೇರಿ ಸಣ್ಣ ಕಲ್ಲುಗಳು ಅರ್ಧ ಕಿ.ಮೀ. ದೂರ ಹಾರಿ ದಂಡಿನ ಕುರುಬರ ಓಣಿಯಲ್ಲಿ ಬಿದ್ದುದರಿಂದ ಜನ ಭಯಭೀತರಾಗಿದ್ದಾರೆ.
ಜನತೆ ತತ್ತರ
ದಿಢೀರ್ ಸ್ಫೋಟಕದ ಸುದ್ದಿಗೆ ಹಾಗೂ ಓಣಿಯಲ್ಲಿ ಬಿದ್ದ ಬೃಹತ್ ಕಲ್ಲಿಗೆ ಅಲ್ಲಿನ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಓಣಿಯ ಹೊರ ಭಾಗದಲ್ಲಿ ಕೆಲಸ ಮಾಡುತ್ತಿದ್ದವರ ಸಮೀಪದಲ್ಲೇ ಕಲ್ಲು ಬಿದ್ದಿದ್ದು, ಜನ ಅಪಾಯದಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ
ಬೃಹತ್ ಕಲ್ಲೊಂದು ಅಪ್ಪಳಿಸಿದ್ದಕ್ಕೆ ಗಾಬರಿಗೊಂಡ ನಿವಾಸಿಗಳು ಸ್ಥಳಕ್ಕೆ ಪೊಲೀಸರನ್ನು ಹಾಗೂ ಗ್ರಾ.ಪಂ. ಅಧಿಕಾರಿಗಳನ್ನು ಕರೆಸಿ ಆತಂಕ ವ್ಯಕ್ತಪಡಿಸಿದರು. ಓಣಿ ನಿವಾಸಿಗಳಾದ ಸಲೀಂ ಶೇಖ ಹಾಗೂ ಇಬ್ರಾಹಿಂ ಸೋಲ್ಜರ್ ಮುಂದಾಳತ್ವದಲ್ಲಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುವ, ತಮ್ಮ ಮನೆಗಳು ಬಿರುಕು ಬಿಡಲು ಕಾರಣವಾಗುತ್ತಿರುವ ಸ್ಫೋಟವನ್ನು ಕೂಡಲೇ ತಡೆಯುವಂತೆ ಪಿಎಸ್‌ಐ ರವಿ ಪವಾರ ಅವರನ್ನು ಕೋರಿದರು. ಪಿಎಸ್‌ಐ ಪ್ರತಿಕ್ರಿಯಿಸಿ, ಜಾಕ್‌ವೆಲ್ ನಿರ್ಮಾಣದ ಜವಾಬ್ದಾರಿ ಹೊತ್ತ ಇಂಜಿನಿಯರ್‌ಗಳನ್ನು ಕರೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಾಕ್‌ವೆಲ್ ನಿರ್ಮಾಣದ ಸ್ಥಳದಲ್ಲಿ ಭಾರಿ ಸ್ಫೋಟಕ ಬಳಸಿ ಕಲ್ಲು ಒಡೆಯುವುದರಿಂದ ನಾವೆಲ್ಲ ದಿನಾ ಜೀವ ಭಯದಾಗ ಬದುಕುವುದಾಗಿದೆ. ಇವತ್ತಿನ ಸ್ಫೋಟಕ್ಕೆ ಬಿದ್ದಿರುವ ಕಲ್ಲಿನಿಂದ ಆಗುವ ಅನಾಹುತದಿಂದ ಜನ ಅದೃಷ್ಟವಶಾತ್ ಪಾರಾಗಿದ್ದಾರೆ. ಕೂಡಲೇ ಈ ರೀತಿ ಸ್ಫೋಟಗಳನ್ನು ನಿಲ್ಲಿಸಬೇಕು.
– ಇಬ್ರಾಹಿಂ ಸೋಲ್ಜರ್ ದಂಡಿನ ಕುರುಬರ ಓಣಿ ನಿವಾಸಿ