ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಸ್ಥಿತಿ!

ಕಲಾದಗಿ: ಘಟಪ್ರಭಾ ಮೇಲ್ಭಾಗದಿಂದ ಹರಿದು ಬಂದ ನೀರು ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಗ್ರಾಮದ ಪ್ರವೇಶದಲ್ಲಿರುವ ಹಿರೇಹಳ್ಳದ ಸೇತುವೆ ಬುಧವಾರ ಸಂಪೂರ್ಣ ಜಲಾವೃತವಾಗಿದೆ.

ಹಳ್ಳಕ್ಕೆ ಹೊಂದಿಕೊಂಡಿರುವ ಹೆರಕಲ್ ಏತ ನೀರಾವರಿ(ದಕ್ಷಿಣ) ಕಾಲುವೆಯೂ ಸೇರಿ ಹಿರೇಹಳ್ಳದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಹರಿದು ಬಂದಿರುವುದರಿಂದ ಸೇತುವೆ ಒಳಗೊಂಡಂತೆ ಆಸುಪಾಸಿನ ಜಮೀನುಗಳು ಜಲಾವೃತವಾಗುತ್ತಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಮುಖ್ಯರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಕೂಗಳತೆಯಲ್ಲಿ ಸಂಪರ್ಕಕ್ಕೆ ಸಿಗುತ್ತಿದ್ದ ಗ್ರಾಮಕ್ಕೀಗ ಸುತ್ತುವರಿದು ಬರಬೇಕಾಗಿದೆ.

ಗ್ರಾಮಕ್ಕೆ ಮೂರು ಕಿ.ಮೀ. ಸಂಚರಿಸಿ ಬೈಪಾಸ್ ರಸ್ತೆ ಮೂಲಕ ಹಾಗೂ ಅದೇ ಮಾರ್ಗದಲ್ಲಿ ಬಾಗಲಕೋಟೆಯತ್ತ ತೆರಳುವಂತಾಗಿದ್ದು, ಇದರಿಂದ ಜನರು ಹೈರಾಣಾಗುತ್ತಿದ್ದಾರೆ. ಸೇತುವೆಯಿಂದ ನೀರು ಹಿಂದೆ ಸರಿಯಲು ಕನಿಷ್ಠ ಐದಾರು ತಿಂಗಳು ಆಗಲಿದ್ದು, ಅಲ್ಲಿವರೆಗೆ ಜನ ತೊಂದರೆ ಅನುಭವಿಸಬೇಕಾಗಿದೆ.

ರೈತರು ಹೈರಾಣ
ಕೇವಲ ಪ್ರಯಾಣಿಕರಷ್ಟೆ ಅಲ್ಲ, ಹಿರೇಹಳ್ಳದ ಸೇತುವೆ ಆಸುಪಾಸು ಹೊಲ, ತೋಟಗಳನ್ನು ಹೊಂದಿರುವ ರೈತರು ಜಮೀನುಗಳಿಗೆ ಹೋಗಿ ಬರಲು ದಿನನಿತ್ಯ ತೊಂದರೆ ಅನುಭವಿಸಬೇಕಾಗಿದೆ. ಹತ್ತಾರು ಹೆಜ್ಜೆ ನಡೆದು ಹಿರೇಹಳ್ಳದ ಸೇತುವೆ ದಾಟಿ ಜಮೀನುಗಳನ್ನು ಸೇರಿಕೊಳ್ಳುತ್ತಿದ್ದವರು ಈಗ ನಿತ್ಯ ಮೂರು ಕಿ.ಮೀ. ಸುತ್ತುವರಿದು ಬೈಪಾಸ್ ರಸ್ತೆ ಮೂಲಕ ಜಮೀನುಗಳಿಗೆ ಹೋಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಎತ್ತರಿಸುವ ಕೆಲಸ ನನೆಗುದಿಗೆ
ದಶಕದಿಂದ ಪ್ರತಿವರ್ಷ ಮಳೆಗಾಲದಲ್ಲಿ ತಿಂಗಳಾನುಗಟ್ಟಲೇ ಹಿರೇಹಳ್ಳದ ಸೇತುವೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಳ್ಳದ ಸೇತುವೆಯನ್ನು ಎತ್ತರಿಸಿ ತೊಂದರೆ ನಿವಾರಿಸಬೇಕು ಎಂಬ ಸಾರ್ವಜನಿಕರ ಕೋರಿಕೆಗೆ ಸರ್ಕಾರ ಮಣೆ ಹಾಕುತ್ತಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಗ್ರಾಮ ಮುಳುಗಡೆಗೆ ಒಳಪಡುತ್ತದೆ ಎಂಬ ಕಾರಣದಿಂದ ಸೇತುವೆಯನ್ನು ಎತ್ತರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ವಾಸ್ತವ ಸ್ಥಿತಿಯನ್ನು ಅರಿತು ಸೇತುವೆಯನ್ನು ಎತ್ತರಿಸುವ ಕೆಲಸಕ್ಕೆ ಮುಂದಾಗಬೇಕಿದೆ.

 

Leave a Reply

Your email address will not be published. Required fields are marked *