ಬ್ಯಾರೇಜ್‌ಗೆ ನೀರು ಹರಿಸುವಂತೆ ಒತ್ತಾಯ

ಕಲಾದಗಿ: ಘಟಪ್ರಭಾ ನದಿಗೆ ಕೂಡಲೇ ನೀರು ಹರಿಸಿ ಕಾತರಕಿ- ಕಲಾದಗಿ ಬ್ಯಾರೇಜ್‌ಗೆ ತುಂಬಿಸುವಂತೆ ಒತ್ತಾಯಿಸಿ ನದಿ ಪಾತ್ರದ ಗ್ರಾಮಸ್ಥರು, ರೈತರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ರಾಯಚೂರು-ಬೆಳಗಾವಿ ಮುಖ್ಯ ರಸ್ತೆ ಹಾಗೂ ಕಾತರಕಿ, ಚಿಕ್ಕಶೆಲ್ಲಿಕೇರಿ ರಸ್ತೆ ಬಂದ್ ಮಾಡಿದ ಕಲಾದಗಿ, ಅಂಕಲಗಿ, ಶಾರದಾಳ, ಉದಗಟ್ಟಿ, ಕಾತರಕಿ, ಕೊಪ್ಪ ಎಸ್.ಕೆ. ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

11 ಗಂಟೆ ಹೊತ್ತಿಗೆ ತಹಸೀಲ್ದಾರ್ ಮೋಹನ ನಾಗಠಾಣ ಅವರೊಂದಿಗೆ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಮೇಲ್ಭಾಗದ ಬ್ಯಾರೇಜ್‌ಗಳ ಗೇಟ್‌ಗಳನ್ನು ತೆಗೆಸಿ ಡ್ಯಾಮ್‌ನಿಂದ ನೀರು ಬಿಡಿಸುತ್ತೇವೆ. ಸ್ವಲ್ಪ ಕಾಲಾವಕಾಶ ಕೊಡಿ ಎಂದು ರೈತರ ಮನವೊಲಿಸಲು ಯತ್ನಿಸಿದರಾದರೂ ರೈತರು ಇದಕ್ಕೆ ಮಣಿಯಲಿಲ್ಲ.
ಮಧ್ಯಾಹ್ನ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನೀರು ಬಿಡಿಸುವ ಪ್ರಯತ್ನ ನಡೆದಿದೆ. ನಾನು ನಿಮ್ಮ ಬೆಂಬಲಿಕ್ಕಿದ್ದೇನೆ ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಆಗಮಿಸಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೇ ಕಾರಣ ಎಂದು ಕಿಡಿಕಾರಿದರು. ಉಪ ವಿಭಾಗಾಧಿಕಾರಿ ಎಚ್. ಜಯಾ ನೀರು ಬಿಡಿಸುವುದಾಗಿ ಎಷ್ಟೇ ಸಮಜಾಯಿಸಿ ನೀಡಿದರೂ ಬಗ್ಗದ ರೈತರು ನೀರು ಬಿಡುವ ಆದೇಶ ಹೊರಡಿಸಿದ ನಂತರವೇ ಹೋರಾಟದಿಂದ ಹಿಂದೆ ಸರಿಯುವುದಾಗಿ ಪಟ್ಟುಹಿಡಿದರು.

ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಕಾರ್ಯನಿಮಿತ್ತ ಅದೇ ಮಾರ್ಗದಲ್ಲಿ ಹೊರಟ್ಟಿದ್ದ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಪ್ರಾದೇಶಿಕ ಆಯುಕ್ತ ಮೇಘಣ್ಣವರ, ಜಿಲ್ಲಾಧಿಕಾರಿ ರಾಮಚಂದ್ರನ್ ಅವರೊಂದಿಗೆ ಮಾತುಕತೆ ನಡೆಸಿ ಕೂಡಲೆ ನೀರು ಬಿಡಲು ಕೋರಿದರು.

ಆದೇಶದ ಬಳಿಕ ಪ್ರತಿಭಟನೆ ವಾಪಸ್:
ಸಂಜೆ ಹೊತ್ತಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾದೇಶಿಕ ಆಯುಕ್ತರಿಗೆ ನೀರು ಬಿಡಲು ಕೋರಿಕೆ ಪತ್ರ ರವಾನೆಯಾಗಿದ್ದರಿಂದ ಹಾಗೂ ಮಂಗಳವಾರ ಸಂಜೆ ಹೊತ್ತಿಗೆ ಹಿಡಕಲ್ ಡ್ಯಾಮ್‌ನಿಂದ ಅರ್ಧ ಟಿಎಂಸಿ ನೀರು ಬಿಡಲಾಗುತ್ತದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು. ಒಂದು ವೇಳೆ ಮಾತು ತಪ್ಪಿದರೆ ಫೆ.28ರಂದು ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಜಿಪಂ ಸದಸ್ಯರಾದ ಶೋಭಾ ಬಿರಾದಾರಪಾಟೀಲ, ಹೂವಪ್ಪ ರಾಠೋಡ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಡಿವೈಎಸ್‌ಪಿ ಎಸ್.ಪಿ. ಗಿರೀಶ, ಸಿಪಿಐ ದೂಳಖೇಡ, ಪಿಎಸ್‌ಐ ಅಶೋಕ ಚವಾಣ್ ಭದ್ರತೆ ಒದಗಿಸಿದರು.