ಚುನಾವಣೆ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕಲಾದಗಿ: ಮುಳುಗಡೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಮಾಡಿದ್ದ ಶಾರದಾಳ, ಅಂಕಲಗಿ ಹಾಗೂ ಗೋವಿಂದಕೊಪ್ಪ ಗ್ರಾಮಗಳ ಸಂತ್ರಸ್ತರು ಅಧಿಕಾರಿಗಳ ಭರವಸೆ ಹಿನ್ನೆಲೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಭಾನುವಾರ ಸಂಜೆ ಗ್ರಾಮದ ಸಾಯಿಮಂದಿರದಲ್ಲಿ ನಡೆದ ಮೂರು ಗ್ರಾಮಗಳ ಪ್ರಮುಖರ ಸಭೆಯಲ್ಲಿ ಬಹಿಷ್ಕಾರ ನಿರ್ಧಾರ ಕೈಬಿಡಲಾಯಿತು.

ಜಿಲ್ಲಾಧಿಕಾರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕರು ಶೀಘ್ರ ಸಮಸ್ಯೆ ಬಗೆಹರಿಸುವ ಕುರಿತು ನೀಡಿದ ಪತ್ರಗಳಲ್ಲಿನ ವಿಷಯ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸೂಕ್ತ ಭರವಸೆ ದೊರೆತ ಹಿನ್ನೆಲೆ ಗ್ರಾಮಸ್ಥರೆಲ್ಲ ಒಕ್ಕೊರಲಿನ ನಿರ್ಧಾರ ಕೈಗೊಂಡರು.

ಲಕ್ಷ್ಮಣಗೌಡ ಗೌಡರ, ಕೆ.ಎಲ್. ಬಿಲಕೇರಿ, ರಮೇಶ ಶಿವನಿಚ್ಚಿ, ಯಲ್ಲಪ್ಪ ನಂದ್ಯಾಳ, ವಿಠಲ ಶಿವನಿಚ್ಚಿ, ನಿಂಗಪ್ಪ ಬೆಳ್ಳಿಕಿಂಡಿ, ಮಾರುತಿ ತೋಟದ, ತಿಪ್ಪಣ್ಣ ಬೀಡಕಿ, ಪರಪ್ಪ ಕಡಮನಿ, ಮಹ್ಮದ್ ಸೌದಾಗಾರ ಇತರರಿದ್ದರು. ಮತದಾನ ಬಹಿಷ್ಕಾರ ಮಾಡಿದ್ದ ಅಂಕಲಗಿ, ಶಾರದಾಳಗಳಲ್ಲಿ ನಾಲ್ಕೈದು ದಿನಗಳ ಹಿಂದೆ ಹಾಗೂ ಶನಿವಾರ ಗೋವಿಂದಕೊಪ್ಪದಲ್ಲಿ ಉಪವಿಭಾಗಾಧಿಕಾರಿ ಜಯಾ, ತಹಸೀಲ್ದಾರ್ ಮೋಹನ ನಾಗಠಾಣ, ಯುಕೆಪಿ ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಭೆ ನಡೆಸಿ ಮತದಾನ ಮಾಡುವಂತೆ ಮನವೊಲಿಸಿದ್ದರು.