More

    ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

    ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
    ಓರ್ವ ಮೇಲ್ವಿಚಾರಕ ಸೇರಿ 6 ಜನ ಆರ್ಥಿಕ ಗಣತಿದಾರರು ಗ್ರಾಮದ ಮನೆ ಮನೆಗಳಿಗೆ ತೆರಳಿ ಅಗತ್ಯ ಮಾಹಿತಿ ಪಡೆಯುತ್ತಿರುವ ಕಾರ್ಯ 20 ದಿನಗಳಿಂದ ಭರದಿಂದ ನಡೆದಿತ್ತು. ಗ್ರಾಮದ 4,784 ಮನೆಗಳ ಪೈಕಿ 1703 ಮನೆಗಳ ಗಣತಿ ಕಾರ್ಯ ಮುಗಿದಿದ್ದು, ಇನ್ನುಳಿದ ಮನೆಗಳ ಗಣತಿ ಕಾರ್ಯಕ್ಕೆ ಹಿನ್ನಡೆಯಾಗಿದೆ.

    ಸಂದೇಶ ರವಾನೆ
    ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ಕಾನೂನುಗಳಿಗೆ ಆರ್ಥಿಕ ಗಣತಿ ಪೂರಕವಾಗಿದೆ. ಮನೆಗೆ ಬರುವ ಆರ್ಥಿಕ ಗಣತಿದಾರರಿಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಕೆಲವು ಪ್ರಮುಖರು, ಸಂಘಟನೆಯವರು ಸಂದೇಶ ರವಾನಿಸುತ್ತಿರುವುದೇ ಅಸಹಕಾರಕ್ಕೆ ಕಾರಣ ಎಂದು ಹೇಳಲಾಗಿದೆ.

    ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಟ
    ಕೇವಲ ಬಾಯಿ ಮಾತಿನಲ್ಲಷ್ಟೆ ಅಲ್ಲದೆ, ಆರ್ಥಿಕ ಗಣತಿಯ ಮೇಲ್ವಿಚಾರಕರ ಭಾವಚಿತ್ರವಿರುವ ಐಡಿ ಕಾರ್ಡ್‌ನ ಚಿತ್ರ ಹಾಕಿ ‘ಇವರು ಮನೆಗೆ ಬಂದರೆ ಮಾಹಿತಿ ನೀಡಬೇಡಿ’ ಎಂಬ ಸಂದೇಶವಿರುವ ಪೋಸ್ಟ್ ಒಂದು ಸ್ಥಳೀಯ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಪ್ರಬಲ ಕೋಮಿನ ಬಹುತೇಕ ಮನೆಯವರು ಮಾಹಿತಿ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆ ಒಂದು ವಾರದಿಂದ ಗಣತಿ ಕಾರ್ಯವನ್ನು ಸ್ಥಗಿತಗೊಳಿಸಿರುವ ಆರ್ಥಿಕ ಗಣತಿದಾರರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಗ್ರಾಮದಲ್ಲಿ ಒಂದಿಷ್ಟು ಮನೆಯವರು ಆರ್ಥಿಕ ಗಣತಿಗೆ ಅಸಹಕಾರ ತೋರುತ್ತಿರುವುದು ಗಮನಕ್ಕೆ ಬಂದಿದೆ. ಆರ್ಥಿಕ ಗಣತಿಗೂ ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧವಿಲ್ಲ. ತಪ್ಪು ಕಲ್ಪನೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುವುದು. ಗಣತಿದಾರರಿಗೆ ಸೂಕ್ತ ರಕ್ಷಣೆ ನೀಡಿ ಗಣತಿ ಕಾರ್ಯ ಮಾಡಿಸಲಾಗುವುದು.
    – ದ್ರಾಕ್ಷಾಯಣಿ ಹಿರೇಮಠ ಕಲಾದಗಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts