ರಜೆಬಿಟ್ಟು ಸೇವೆಗೆ ತೆರಳಿದ ಸೈನಿಕ

ಕಲಾದಗಿ: ದೇಶದ ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ರಜೆಯ ಮೇಲೆ ಊರಿಗೆ ಬಂದಿದ್ದ ಸೈನಿಕನಿಗೆ ತುರ್ತು ಸಂದೇಶ ಬಂದ ಹಿನ್ನೆಲೆ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ ಸೈನಿಕನಿಗೆ ಕಟುಂಬಸ್ಥರು ಆರತಿ ಎತ್ತಿ ತಿಲಕವಿಟ್ಟು ಬೀಳ್ಕೊಟ್ಟರು.

ಸಮೀಪದ ಕೊಪ್ಪ ಎಸ್.ಕೆ. ಗ್ರಾಮದ ವೀರಯೋಧ ರಮೇಶ ಮಲಘಾ. ರಜೆಯ ಮೇಲೆ ಊರಿಗೆ ಬಂದಿದ್ದರು. ರಜೆ ಮುಗಿಯಲು ಒಂದು ವಾರವಿದೆಯಾದರೂ ಯುದ್ಧ ಸಾಧ್ಯತೆ ಇರುವುದರಿಂದ ಅವರಿಗೆ ಫೆ.26ರಂದು ಬರಲು ಸನ್ನದ್ಧರಾಗಿ ಯಾವಾಗ ಬೇಕಾದರೂ ತುರ್ತು ಕರೆ ಬರಬಹುದು ಎಂಬ ಸಂದೇಶ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿರುವಾಗ ನಾನಿಲ್ಲಿ ಅರಾಮಾಗಿ ಇರಲಿಕ್ಕೆ ಮನಸ್ಸಾಗುತ್ತಿಲ್ಲ. ಆದಷ್ಟು ಬೇಗ ಹೋಗಿ ಸೈನ್ಯ ಸೇರಿಕೊಳ್ಳುತ್ತೇನೆ ಎಂದು ಹೇಳಿದರು.

ಅಸ್ಸಾಂನ ಗುವಾಹಟಿಯಲ್ಲಿ ಸೇವೆ ಸಲ್ಲಿಸುತ್ತಿರುವ 25 ವರ್ಷದ ರಮೇಶ 7ವರ್ಷ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರಜೆ ಮೇಲೆ ಬಂದಿರುವ ಕಾತರಕಿಯ ಅನೀಲ ವಜ್ರಮಟ್ಟಿ, ಶ್ರೀಶೈಲ ಕೆರಕಲಮಟ್ಟಿ ಅವರಿಗೂ ಸನ್ನದ್ಧರಾಗಿರುವಂತೆ ಸಂದೇಶ ಸೇನೆಯಿಂದ ಬಂದಿದೆ. ಕುಟುಂಬದೊಂದಿಗೆ ಒಂದಿಷ್ಟು ದಿನ ಕಾಲ ಕಳೆಯಲು ಬಂದಿರುವ ಜಿಲ್ಲೆಯ ಯೋಧರು ಸೇನೆಯ ಕರೆಗೆ ಕಾಯುತ್ತಿದ್ದಾರೆ.

ದೇಶದ ಸಂಕಷ್ಟ ಸ್ಥಿತಿಯಲ್ಲಿ ನನ್ನ ಮಗ ಸೈನ್ಯದಾಗ ಇರೋದು ಭಾಳ ಹೆಮ್ಮೆಯಿದೆ. ನಮ್ಮ ಶಕ್ತಿ ಇರುವತನಕ ಹೊಲದಲ್ಲಿ ನಾವು ದುಡಿಯುತ್ತೇವೆ. ನೀ ದೇಶಕ್ಕಾಗಿ ದುಡಿ. ಅದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ ಎಂದು ಅವನಿಗೆ ಹೇಳಿದ್ದೇವೆ.
– ಕೃಷ್ಣಾ ಮಲಘಾಣ ಯೋಧ ರಮೇಶ ತಂದೆ