ಭೋರ್ಗರೆವ ಘಟಪ್ರಭೆಯಲ್ಲಿ ಮೀನು ಬೇಟೆ

ಕಲಾದಗಿ: ಭೋರ್ಗರೆಯುತ್ತಿರುವ ನದಿಯಲ್ಲಿ ಮೀನಿಗಾಗಿ ಬಲೆ ಹಾಕಿ ಬೇಟೆಗೆ ಕಾಯುತ್ತ ಬ್ಯಾರೇಜ್ ಮೇಲೆ ಕುಳಿತ ಜನರು, ಬಲೆಗೆ ಬೀಳುವ ಬೇಟೆಯನ್ನು ಕುತೂಹಲದಿಂದ ನೋಡುತ್ತಿರುವ ಮೀನುಪ್ರಿಯರು!
ಒಂದು ವಾರದಿಂದ ಸಮೀಪದ ಸೈಪೊದ್ದೀನಬಾಬಾ ಗುಡ್ಡದ ಬಳಿ ಘಟಪ್ರಭಾ ನದಿಗೆ ಕಟ್ಟಿರುವ ಬ್ಯಾರೇಜ್ ಮೇಲೆ ಕಂಡು ಬರುತ್ತಿರುವ ದೃಶ್ಯಗಳಿವು.

ಘಟಪ್ರಭಾ ಮೇಲ್ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದೊಂದು ವಾರದಿಂದ ನದಿಯ ಭೋರ್ಗರೆತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮತ್ತು ಆಲಮಟ್ಟಿ ಜಲಾಶಯ ಹಿನ್ನೀರಿನ ಒತ್ತಡವೂ ಮೇಲೆರುತ್ತಿರುವುದು ಭರ್ಜರಿ ಮೀನುಗಳ ಬೇಟೆಗೆ ಅವಕಾಶ ಮಾಡಿಕೊಟ್ಟಿದೆ.

ಮೀನುಗಳಿಗಾಗಿ ಜನರ ದಂಡು
ಮೀನು ಬೇಟೆಗಾರರಿಗೆ ಕಳೆದೊಂದು ವಾರದಿಂದ ಬ್ಯಾರೇಜ್ ನೆಚ್ಚಿನ ಸ್ಥಳವಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಇಲ್ಲಿ ಮೀನು ಹಿಡಿಯುವವರು, ಕೊಳ್ಳುವವರು ಹಾಗೂ ಕುತೂಹಲದಿಂದ ನೋಡುವವರು ದಂಡೆಯಲ್ಲಿ ಜಮಾಯಿಸಿರುತ್ತಾರೆ.

ಭರ್ಜರಿ ಬೇಟೆ
ಬ್ಯಾರೇಜ್‌ನ ಎಲ್ಲ ಗೇಟುಗಳಿಗೆ ಅಡ್ಡಲಾಗಿ ದೊಡ್ಡ ದೊಡ್ಡ ಬಲೆಗಳನ್ನು ಹಾಕಿ ಅದಕ್ಕೆ ಮೀನುಗಳು ಬೀಳುವುದನ್ನೇ ಕಾಯುತ್ತ ಕುಳಿತುಕೊಳ್ಳುವ ಇವರ‌್ಯಾರು ಮೀನುಗಾರರಲ್ಲ. ಗ್ರಾಮ ಸೇರಿ ಆಸುಪಾಸಿನ ಶಿರಗುಂಪಿ, ನಿಂಗಾಪುರ, ಕಾತರಕಿ ಗ್ರಾಮಗಳ ಕೂಲಿ ಕಾರ್ಮಿಕರು ಎಂಬುದು ವಿಶೇಷ. ಬ್ಯಾರೇಜ್ ನೀರಿನಿಂದ ಆವೃತವಾದಾಗ ಇವರಿಗೆ ಬಹುತೇಕ ವಾರದಮಟ್ಟಿಗೆ ಮೀನು ಬೇಟೆಯೇ ಕೆಲಸ!

ವಿವಿಧ ಮೀನುಗಳ ಸುಗ್ಗಿ
ಆಲಮಟ್ಟಿ ಹಿನ್ನೀರಿನ ಮೂಲಕ ನದಿಗೆ ಬರುತ್ತಿರುವ ಕಟ್ಲೆ, ಬಾಳಿ, ಹಾವು, ಜಿಂಗಿ ಮೀನು ಹೀಗೆ ನಾನಾ ಬಗೆಯ ಮೀನುಗಳು 40 ರಿಂದ 50 ಕೆಜಿ ತೂಕದ ಭಾರಿ ಗಾತ್ರದ ಮೀನುಗಳು ಬಲೆಗೆ ಬೀಳುತ್ತವೆ. ಜತೆಗೆ ಭರ್ಜರಿ ವ್ಯಾಪಾರವನ್ನು ಮಾಡಿಕೊಡುತ್ತವೆ.

ವರ್ಷದಾಗ ಇದೊಂದು ವಾರ ಆಲಮಟ್ಟಿ ಹಿನ್ನೀರಿನ್ಯಾಗ ಬರುವ ಭಾರಿ ಮೀನು ಸಿಗತಾವರ‌್ರೀ. ದಿನಕ್ಕೆ ಏನಿಲ್ಲಂದ್ರು ನೂರು ಕೆಜಿ ತೂಕದ ಮೀನು ಸಿಗತಾವು. ಈ ಸಾರಿ ಭಾಳ ದೊಡ್ಡ ದೊಡ್ಡ ಮೀನು ಬಲೆಗೆ ಬೀಳುತ್ತಿರುವುದು ವಿಶೇಷ. ಮಾರಾಟ ಮಾಡೋರು, ತಿನ್ನೋರು ಇಲ್ಲೆ ಬಂದು ಒಯ್ಯತಾರ…
– ಹನುಮಂತ ಭರಮಕ್ಕನವರ ಮೀನು ಹಿಡಿಯುವಾತ

 

Leave a Reply

Your email address will not be published. Required fields are marked *