ಕಲಾದಗಿ: ಗ್ರಾಮದಲ್ಲಿ ಅನ್ಯರಾಜ್ಯದ ವ್ಯಾಪಾರಿಗಳನ್ನು ವಿರೋಧಿಸಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜ.27 ರಂದು ಕಲಾದಗಿ ಬಂದ್ ಮಾಡಲಾಗುವುದೆಂದು ಸ್ಥಳೀಯ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಭಾಸ ಡಿ. ದರ್ವೆ ಮನವಿ ಮಾಡಿದ್ದಾರೆ.
ಗ್ರಾಮದ ಪಾಂಡುರಂಗದೇವರ ದೇವಸ್ಥಾನ ಆವರಣದಲ್ಲಿ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿ ಅನ್ಯ ವ್ಯಾಪಾರಸ್ಥರಿಂದಾಗಿ ಸ್ಥಳೀಯ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಕಳಪೆ ಗುಣಮಟ್ಟದ ವಸ್ತುಗಳನ್ನು, ಕಿರಾಣಿ ಸಾಮಾನುಗಳನ್ನು ನೀಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ‘ಅನ್ಯ ರಾಜ್ಯದವರನ್ನು ತೊಲಗಿಸಿ ಕಲಾದಗಿ ಉಳಿಸಿ’ಎಂಬ ಅಭಿಯಾನ ನಡೆಸಲಾಗುವುದು. ಅಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6ರವರೆಗೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗುವುದೆಂದು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಗ್ರಾಮದ ಹೊರಭಾಗದಲ್ಲಿರುವ ಶ್ರೀ ಸಾಯಿಮಂದಿರದಿಂದ ಹೊರ ಪ್ರತಿಭಟನಾ ಮೆರವಣಿಗೆ ಬಸ್‌ನಿಲ್ದಾಣ, ಅಂಬೇಡ್ಕರ್ ವೃತ್ತ, ಹೊಸೂರ ವೃತ್ತ, ಕೊಬ್ರಿ ವೃತ್ತ, ಸವಾಕಟ್ಟಿ, ದರ್ಗಾ ಮೂಲಕ ನಾಡಕಚೇರಿ ತಲುಪಲಿದೆ. ಬಳಿಕ ಉಪತಹಸೀಲ್ದಾರ್‌ರರಿಗೆ ಮನವಿ ನೀಡಲಾಗುವುದು. ತದನಂತರ ಕನ್ನಡ ಶಾಲೆ ಬಳಿಯ ರಂಗಮಂದಿರದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ಗಾಮದ ಪ್ರಮುಖರಾದ ಮಲ್ಲಪ್ಪಣ್ಣ ಜಮಖಂಡಿ, ರಮೇಶ ಮಾದರ ಮಾತನಾಡಿದರು.
ಸಂಘದ ಪ್ರಮುಖರಾದ ನಾರಾಯಣ ಬೋಜಗಾರ, ಬಸವರಾಜ ಕುಳ್ಳೊಳ್ಳಿ, ಶಶಿಧರ ಮಲ್ಲಿಕಾರ್ಜುನ ಮಠ, ನಾಗರಾಜ ಚವಾಣ್ ಮಾತನಾಡಿ, ಮುಳುಗಡೆ ಪ್ರಕ್ರಿಯೆಯಿಂದಾಗಿ ವ್ಯಾಪಾರ ನಡಿಯದೆ ಸಾಕಷ್ಟು ತೊಂದರೆ ಆಗಿ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಬೇರೆ ರಾಜ್ಯದ ವ್ಯಾಪಾರಸ್ಥರಿಗೆ ನಿರ್ಭಂಧ ಹೇರಲು ಈ ಬಂದ್ ನಡೆಯಲಿದ್ದು, ಎಲ್ಲರು ಸಹಕರಿಸಬೇಕು ಎಂದರು.
ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಮಲ್ಲು ಕುಂದರಗಿ, ಮಂಜು ಅಂಗಡಿ, ಸಂಜು ಕಾಗವಾಡ, ಗುರು ಕೆಂಪಣ್ಣವರ ಇತರರಿದ್ದರು.