ಗಮನಸೆಳೆದ ವಿಜ್ಞಾನ ಪ್ರಾತ್ಯಕ್ಷಿಕೆಗಳು

ಕಲಾದಗಿ: ಇಲ್ಲಿನ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಹಬ್ಬದ ಅಂಗವಾಗಿ ಗುರುವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.

ಮನೆ ಮೇಲಿನ ಟ್ಯಾಂಕ್ ತುಂಬಿದರೆ ಮೊಳಗುವ ಸೈರನ್, ಪರಿಸರ ಮಾಲಿನ್ಯ ನಿಯಂತ್ರಣ, ಆಹಾರ ಸುರಕ್ಷತೆ ಹೀಗೆ ಹತ್ತು ಹಲವು ವೈಜ್ಞಾನಿಕ ಆವಿಷ್ಕಾರಗಳನ್ನು, ಹೊಸ ಆಲೋಚನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳು ವಿವರಿಸಿದ್ದು ಎಲ್ಲರ ಪಾಲಕರು, ಸಾರ್ವಜನಿಕರು, ಶಿಕ್ಷಕರ ಗಮನ ಸೆಳೆಯಿತು.

ವೈಜ್ಞಾನಿಕ ಮನೋಭಾವನೆ ಬೆಳೆಸುವುದರೊಂದಿಗೆ ಚಿಂತನೆಗೆ ಹಚ್ಚುವ ವಿವಿಧ ರೀತಿಯ 121ಕ್ಕೂ ಅಧಿಕ ಪ್ರಾತ್ಯಕ್ಷಿಕೆಗಳು ಪ್ರದರ್ಶನಗೊಂಡವು.

ಬಹುಮಾನ ವಿತರಣೆ: ಹೈಡ್ರೋಲಿಕ್ ಬ್ರಿಡ್ಜ್ ಮಾದರಿಗೆ ನಿಲೋರ್ ಮಕಾನದಾರ ಹಾಗೂ ಬಸಮ್ಮ ಹಡಪದ ಪ್ರಥಮ, ಪ್ರಾಜೆಕ್ಟರ್ ಮಾದರಿಗೆ ಚಿನ್ಮಯ ತಂಬಾಕದ ಹಾಗೂ ನಾರಾಯಣ ಪವಾರ ದ್ವಿತೀಯ, ಜಲ ಸಂರಕ್ಷಣೆ ಮಾದರಿಗೆ ಅಬ್ದುಲ್ ಸೈಯದ್ ಹಾಗೂ ತೇಲಿ ಮುಸ್ತಾಕ್ ಬನ್ನೂರ ತೃತೀಯ ಬಹುಮಾನ ಪಡೆದರು.

ಬದುಕಿಗೆ ಯೋಗ ಅವಶ್ಯ:
ಇಡೀ ವಿಶ್ವವೇ ಭಾರತೀಯ ಯೋಗ ವಿಜ್ಞಾನ ಒಪ್ಪಿಕೊಂಡಿದ್ದು, ಇನ್ನಾದರೂ ನಮ್ಮ ಬದುಕಿಗೆ ಯೋಗ ವಿಜ್ಞಾನದ ಅವಶ್ಯಕತೆ ನಾವು ಅರಿತುಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಎಚ್.ಎನ್. ನಾಯನೇಗಲಿ ಹೇಳಿದರು.
ವಿಜ್ಞಾನ ಹಬ್ಬದ ಸಮಾರೋಪದಲ್ಲಿ ಅವರು ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ವಿ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಆರ್.ವಿ. ಜಾಧವ, ಆರ್.ಪಿ. ಜೋಶಿ ಇದ್ದರು. ವಿಜ್ಞಾನ ಶಿಕ್ಷಕ ಐ.ಕೆ. ಕೆಂಚನಗೌಡರ ಪ್ರಾಸ್ತಾವಿಕ ಮಾತನಾಡಿದರು. ಅವಿನಾಶ ರಾಜೂರ ವಂದಿಸಿದರು. ಪಿ.ಎಚ್. ಮಾರಂಗಪ್ಪನವರ ನಿರೂಪಿಸಿದರು.