ಕಲಬುರ್ಗಿ ಹತ್ಯೆ ತನಿಖೆ ಮತ್ತೆ ಶುರು

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಗಾಗಿ ರಚಿಸಲಾದ ಸಿಐಡಿ ಹೊಸ ತನಿಖಾ ತಂಡ ಕೆಲಸ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೆಲ ಮಹತ್ವದ ಮಾಹಿತಿ ಸಂಗ್ರಹಿಸಿದೆ.

2015ರಲ್ಲಿ ನಡೆದ ಕಲಬುರ್ಗಿ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಆದರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ

ಎಸ್​ಐಟಿ ಯಶಸ್ವಿಯಾಗಿತ್ತು. ಹೀಗಾಗಿ ಇತ್ತೀಚೆಗೆ ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಹೊಸ ತಂಡ ರಚಿಸಲಾಗಿತ್ತು. ತನಿಖೆ ಆರಂಭಿಸಿದ ತಂಡ ಗೌರಿ ಹತ್ಯೆಗೂ ಕಲಬುರ್ಗಿ ಹತ್ಯೆಗೂ ಕೆಲ ಸಾಮ್ಯತೆಗಳಿವೆ ಎಂದಿದೆ. ಗೌರಿ ಹತ್ಯೆಗೆ 0.65 ಪಿಸ್ತೂಲ್ ಬಳಸಲಾಗಿತ್ತು, ಕಲಬುರ್ಗಿ ಕೊಲೆಗೂ 0.65 ಪಿಸ್ತೂಲ್ ಬಳಸಲಾಗಿದೆ. ಜತೆಗೆ ಹತ್ಯೆ ಮಾಡಿದ ಶೈಲಿ ಒಂದೇ ರೀತಿ ಇದೆ. ಬೈಕಲ್ಲಿ ಬಂದವರೇ ಕೊಲೆ ಮಾಡಿದ್ದಾರೆ. ಹೀಗಾಗಿ ಗೌರಿ ಕೇಸಲ್ಲಿ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.

ಆದರೆ, ತನಿಖೆ ವಿಳಂಬ ಪ್ರಶ್ನಿಸಿ ಕಲಬುರ್ಗಿ ಅವರ ಕುಟುಂಬ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಜ.15ಕ್ಕೆ ವಿಚಾರಣೆಗೆ ಬರಲಿದೆ. ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶ ಅನುಸರಿಸಿ ಮುಂದಿನ ತನಿಖೆ ಕೈಗೊಳ್ಳಲು ಸಿಐಡಿ ತೀರ್ವನಿಸಿದೆ.