ಕಲಬುರಗಿ ಕೆಂಡ: ರಾಜ್ಯದಲ್ಲಿ 3-4 ಡಿಗ್ರಿ ಹೆಚ್ಚಿದ ಉಷ್ಣಾಂಶ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಾರ್ಭಟ ತೀವ್ರಗೊಳ್ಳುತ್ತಿದ್ದು ಶುಕ್ರವಾರ ಕಲಬುರಗಿಯ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಪ್ರತಿ ಜಿಲ್ಲೆಗಳ ಸರಾಸರಿ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚಳವಾಗಿರುವ ಪರಿಣಾಮ ಜನತೆ ತತ್ತರಿಸಿದ್ದಾರೆ.

ರಾಯಚೂರಲ್ಲಿ 42, ವಿಜಯಪುರ 41.6, ಬಾಗಲಕೋಟೆ 41.4, ಕೊಪ್ಪಳ, ಬಳ್ಳಾರಿಯಲ್ಲಿ 41, ಬೀದರ್​ನಲ್ಲಿ 40.4, ಗದಗದಲ್ಲಿ 39.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿ ಜನತೆ ಬಿಸಿಲಿಗೆ ತತ್ತರಿಸಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಮಳೆ ಮುನ್ಸೂಚನೆ: ತಾಪಮಾನ ಹೆಚ್ಚಳದ ನಡುವೆಯೂ ರಾಜ್ಯದ ಹಲವೆಡೆ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಕರ್ನಾಟಕದ ದಕ್ಷಿಣದ ಕನ್ನಡ ಜಿಲ್ಲೆಯಲ್ಲಿ 27 ಮತ್ತು 28ರಂದು ಮಳೆ ಬೀಳಲಿದ್ದು, ಏ.29 ಮತ್ತು 30 ಉಡುಪಿ, ಉತ್ತರ ಕನ್ನಡ ಒಳಗೊಂಡು ಮೂರೂ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು ಹಾಸನ,ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಏ.30ರವರೆಗೆ ಮಳೆ ಬೀಳಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಸಮುದ್ರವನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.