ಕಲಬುರಗಿ: ಹಸುಗಳನ್ನು ಮೇಯಿಸುವುದಕ್ಕೆ ಕಲಬುರಗಿಯ ಹೊರವಲಯ ಸೇಫ್ ಅಲ್ಲ. ಮೇವು ತಿನ್ನೋದಕ್ಕೆ ಹೊರಟ ಹಸುವಿನ ಬಾಯಿಗೆ ಬಂದದ್ದು ಮೇವಲ್ಲ, ಸ್ಪೋಟಕ. ಅದು ಸ್ಫೋಟಗೊಂಡು ಹಸುವಿನ ಬಾಯಿಯೇ ಹರಿದು ಹೋದ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಹೊರವಲಯದ ಉಪಳಾಂವ ಕ್ರಾಸ್ ಬಳಿ ಬುಧವಾರ ನಡೆದಿದೆ.
ಕಲಬುರಗಿ ಹೊರವಲಯದ ಹುಮನಾಬಾದ್ ರಸ್ತೆ ಸಫಾರಿ ದಾಬಾ ಬಳಿ ಮದ್ದುಗುಂಡು ಸ್ಪೋಟಗೊಂಡು ಆಕಳಿಗೆ ಗಾಯವಾದ ಘಟನೆ ಬುಧವಾರ ಸಂಭವಿಸಿದೆ. ಗೋಪಾಲಕ ಜತೆಗಿದ್ದಾಗಲೇ ಈ ಘಟನೆ ಸಂಭವಿಸಿದ್ದು, ಆಹಾರ ಎಂದು ತಿಳಿದುಕೊಂಡು ಹಸು ಒಣಹುಲ್ಲಿಗೆ ಬಾಯಿ ಹಾಕಿದೆ. ಅಲ್ಲೇ ಇದ್ದ ಚೆಂಡಿನಂತಹ ವಸ್ತು ಹಸುವಿನ ಬಾಯಿ ಸೇರಿದೆ. ಜಗಿಯುವುದಕ್ಕೆ ಆರಂಭಿಸುತ್ತಲೇ ಅದು ಬಾಯಿಯಲ್ಲೇ ಸ್ಫೋಟವಾಗಿದ್ದು, ಹಸುವಿನ ಬಾಯಿಯೇ ಹರಿದು ಹೋಗಿದೆ. ಭಾರಿ ಶಬ್ದದೊಂದಿಗೆ ಅದು ಸ್ಫೋಟಗೊಂಡಿದ್ದು, ಬಾಯಿ ಹರಿದ ಕಾರಣ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡಿರುವ ನಂದಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಂದಿಯನ್ನು ಬೀದರ್ನ ಪಶು ವಿವಿಗೆ ಕರೆದೊಯ್ಯಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.