ಪ್ರಿಯಕರ ಕೊಂದ ಪತಿಯ ಶವದ ಮುಂದೆ ಅಪಘಾತದ ನಾಟಕವಾಡಿದ ಪತ್ನಿ

ಕಲಬುರಗಿ: ಕಲಬುರಗಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದೇ ನಂಬಲಾಗಿದ್ದ ವ್ಯಕ್ತಿಯ ಪತ್ನಿಯ ಪ್ರಿಯಕರನೇ ಕೊಲೆ ಮಾಡಿ ದೇಹವನ್ನು ರಸ್ತೆಯ ಮೇಲೆ ಎಸೆದು ಅಪಘಾತವೆಂದು ಬಿಂಬಿಸಿದ್ದ. ಪ್ರಿಯಕರನ ಈ ನಾಟಕದಲ್ಲಿ ಮೃತನ ಪತ್ನಿಯೂ ಪಾತ್ರಧಾರಿಯಾಗಿದ್ದಳು ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಆಳಂದನ ಕೂಡಲಹಂಗರಗಾ ಗ್ರಾಮದ ವಿನೋದ್​ ಮೃತ ವ್ಯಕ್ತಿಯಾಗಿದ್ದು, ಈತನ ಕೊಲೆಯ ಆರೋಪದಲ್ಲಿ ಪತ್ನಿ ಶಾಂತಾಬಾಯಿ (35), ಈಕೆಯ ಪ್ರಿಯಕರ ಹೀರಾಸಿಂಗ್ (38) ಎಂಬಾತನನ್ನು ಬಂಧಿಸಲಾಗಿದೆ.

ನಡೆದದ್ದೇನು?
ಮೇ 25 ರಂದು ಕೂಡಲಹಂಗರಗಾ ಗ್ರಾಮದಲ್ಲಿ ವಿನೋದ್​ ಅವರ ಶವ ರಸ್ತೆಯಲ್ಲಿ ಪತ್ತೆಯಾಗಿತ್ತು. ಅಲ್ಲಿ ಅಪಘಾತ ನಡೆದ ರೀತಿಯಲ್ಲಿ ಸನ್ನಿವೇಶ ಸೃಷ್ಟಿಸಲಾಗಿತ್ತು. ಬೈಕ್​ ಅನ್ನು ಅಪಘಾತಕ್ಕೀಡಾದ ರೀತಿಯಲ್ಲಿ ಇರಿಸಲಾಗಿತ್ತು. ಸ್ಥಳಕ್ಕೆ ಬಂದ ಆಳಂದ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ, ಪೊಲೀಸರು ಮತ್ತೊಂದು ಕೋನದಲ್ಲಿ ತನಿಖೆ ಆರಂಭಿಸಿದ್ದರು. ಆಗ ಮೃತ ವಿನೋದ್​ ಪತ್ನಿ ಶಾಂತಾ ಬಾಯಿಗೆ ಸಂಬಂಧಿ ಹೀರಾಸಿಂಗ್​ ಎಂಬುವವನೊಂದಿಗೆ ಅಕ್ರಮ ಸಂಬಂಧ ಇದ್ದ ಸಂಗತಿ ಬಹಿರಂಗವಾಗಿದೆ. ಶಾಂತಾ ಬಾಯಿ ಜತೆ ಹೀರಾಸಿಂಗ್​ ನಾಲ್ಕೈದು ವರ್ಷಗಳಿಂದಲೂ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಪತಿಗೆ ಮದ್ಯಪಾನ, ಪ್ರಿಯಕರನ ಜತೆ ಸರಸ
ಮೃತ ವಿನೋದ್​, ಪತ್ನಿ ಶಾಂತಾ ಬಾಯಿ, ಹೀರಾಸಿಂಗ್​ ಮೂವರು ಮನೆಯಲ್ಲಿ ಒಟ್ಟಿಗೇ ಮದ್ಯ ಸೇವಿಸುತ್ತಿದ್ದರು. ಪತಿಗೆ ಕಂಠಪೂರ್ತಿ ಕುಡಿಸುತ್ತಿದ್ದ ಶಾಂತಾ ಬಾಯಿ ನಂತರ ಹೀರಾಸಿಂಗ್​ನೊಂದಿಗೆ ಅಕ್ರಮ ಸಂಪರ್ಕದಲ್ಲಿ ತೊಡಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪರಸ್ಪರ ಹತ್ಯೆಗೆ ಸಂಚು
ಪತ್ನಿಯೊಂದಿಗೆ ಹೀರಾಸಿಂಗ್​ ಸಂಬಂಧ ಹೊಂದಿರುವ ವಿಚಾರ ತಿಳಿದ ವಿನೋದ್​, ಹೀರಾಸಿಂಗ್​ನನ್ನು ಕೊಲ್ಲಲ್ಲು ಸಂಚು ರೂಪಿಸಿದ್ದ. ಇದೇ ವೇಳೆ ತನ್ನ ಅಕ್ರಮ ಸಂಬಂಧ ಪತಿಗೆ ತಿಳಿದ ಹಿನ್ನೆಲೆಯಲ್ಲಿ ಪತ್ನಿ ಶಾಂತಾಬಾಯಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಹೀಗಿರುವಾಗಲೇ ಹೀರಾಸಿಂಗ್​ ಮತ್ತು ವಿನೋದ್​ ಮದ್ಯ ಸೇವನೆಗೆಂದು ಜತೆಯಲ್ಲಿ ತೆರಳುತ್ತಿದ್ದಾಗ ಅಕ್ರಮ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಹೀರಾಸಿಂಗ್​, ವಿನೋದ್​ನನ್ನು ಕೊಂದು ರಸ್ತೆಯಲ್ಲಿ ಎಸೆದು ಅಪಘಾತವಾದ ರೀತಿಯಲ್ಲಿ ಸನ್ನಿವೇಶವನ್ನು ಸೃಷ್ಟಿಸಿದ್ದಾನೆ. ನಂತರ ಬಂದು ಶಾಂತಾಬಾಯಿಗೆ ಕೊಲೆಯ ಸಂಗತಿ ತಿಳಿಸಿದ್ದಾನೆ.

ಅದರಂತೆ ರಸ್ತೆಯಲ್ಲಿ ಬಿದ್ದಿದ್ದ ವಿನೋದ್​ ಶವದ ಬಳಿಗೆ ಮರುದಿನ ಬಂದ ಶಾಂತಾಬಾಯಿ ಪತಿಯ ಸಾವಿಗಾಗಿ ಕಣ್ಣೀರಿಟ್ಟಿದ್ದಳು. ಕೊನೆಗೆ ಇದೆಲ್ಲವೂ ಶಾಂತಾಬಾಯಿ ಮತ್ತು ಪ್ರಿಯಕರ ನಡೆಸಿದ ಕೃತ್ಯವೆಂಬುದು ಬಯಲಾಗಿದೆ. ತನಿಖೆ ವೇಳೆ ಶಾಂತಾಬಾಯಿ ತಪ್ಪೊಪ್ಪಿಕೊಂಡಿದ್ದಾಳೆ.

Leave a Reply

Your email address will not be published. Required fields are marked *