ಹಾಡಹಗಲೇ ಲಾಡ್ಜ್ ಮ್ಯಾನೇಜರ್ ಹತ್ಯೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜನನಿಬಿಡ ಕೇಂದ್ರ ಬಸ್ ನಿಲ್ದಾಣ ಎದುರೇ ಗುರುವಾರ ಬೆಳ್ಳಂಬೆಳಗ್ಗೆ ಲಾಡ್ಜ್ ಮ್ಯಾನೇಜರ್ನನ್ನು ಬರ್ಬರ ಕೊಲೆ ಮಾಡಲಾಗಿದೆ.

ಮೇಳಕುಂದಾ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ವಿಠ್ಠಲ್ ಕಲಬುರ್ಗಿ (30) ಕೊಲೆಯಾದವ. ಬಸ್ ನಿಲ್ದಾಣ ಮುಂಭಾಗದ ಕೆಎಚ್ಬಿ ಕಾಂಪ್ಲೆಕ್ಸ್ನಲ್ಲಿರುವ ಕಾವೇರಿ ಲಾಡ್ಜ್ನಲ್ಲಿ ವ್ಯವಸ್ಥಾಪಕರಾಗಿ ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ.

ಮಲ್ಲಿಕಾರ್ಜುನ ಎರಡು ದಿನಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಗುರುವಾರ ಬೆಳಗ್ಗೆ ಕೆಲಸ ಮುಗಿಸಿಕೊಂಡ ಬಳಿಕ ಊರಿಗೆ ಹೋಗಲು ಲಾಡ್ಜ್ನಿಂದ ಕೆಳಗಿಳಿದು ಮುಖ್ಯರಸ್ತೆಗೆ ಬಂದಿದ್ದಾರೆ. ಈ ವೇಳೆ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾತನಾಡಿಸಿದಂತೆ ಮಾಡಿ ಮಾರಕಾಸ್ತ್ರದಿಂದ ಚುಚ್ಚಿದ್ದಾರೆ. ಅಷ್ಟಕ್ಕೆ ಬಿಡದೆ ಅಟ್ಟಾಡಿಸಿ ಇರಿದಿದ್ದಾರೆ. ನೆಲಕ್ಕೆ ಬಿಳುತ್ತಲೇ ಐದಾರು ಸಲ ಕತ್ತಿನ ಭಾಗಕ್ಕೆ ಚುಚ್ಚಿ ಬೈಕ್ ಏರಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವಾಟ್ಸ್ಪ್ನಲ್ಲಿ ಹರಿದಾಡುತ್ತಿದೆ.

ಬೆಳಗ್ಗೆ 9ರ ಸುಮಾರಿಗೆ ಅಲ್ಲಿನ ಹೋಟೆಲ್, ಟಿ- ಬಂಡಿಗಳಲ್ಲಿ ಜನರು ತುಂಬಿದ್ದರು. ರಸ್ತೆಯಲ್ಲಿ ಜನ ಓಡಾಡುತ್ತಿದ್ದರು. ಇಂಥದರಲ್ಲೇ ಜನರು ನೋಡನೋಡುತ್ತಿದ್ದಂತೆ ದುಷ್ಕರ್ಮಿಗಳು ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ಜನರು ದಾಳಿ ನಡೆಯುವುದನ್ನು ನೋಡುತ್ತಲೇ ದಿಕ್ಕಾಪಾಲಾದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತ ಬಿದ್ದಿದ್ದ ಮಲ್ಲಿಕಾರ್ಜುನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಎಸ್ಪಿ ಎನ್.ಶಶಿಕುಮಾರ್, ಎಎಸ್ಪಿ ಅಕ್ಷಯ ಹಾಕಿ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಪಿಎಸ್ಐ ವಾಹೀದ್ ಕೊತ್ವಾಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಘಟನೆ ಕುರಿತು ಲಾಡ್ಜ್, ಸುತ್ತಲಿನ ಅಂಗಡಿ ಮಾಲೀಕರನ್ನು ಮಾತನಾಡಿಸಿದ ಎಸ್ಪಿ ಇತರ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರಲ್ಲದೆ ಸಿಸಿ ಟಿವಿ ಪೂಟೇಜ್ ಪಡೆದರು. ಬೈಕ್ ಯಾರದ್ದು, ಕೃತ್ಯ ನಡೆಸಿದವರು ಯಾರು ಎಂಬ ಬಗ್ಗೆ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಮನೆಯವರು ಮಾತ್ರ ತಮಗೆ ಯಾರ ಮೇಲೂ ಅನುಮಾನವಿಲ್ಲ, ನಮ್ಮೂರಿನಲ್ಲಿ ಯಾರೂ ಶತ್ರುಗಳಿಲ್ಲ ಎಂದು ಹೇಳಿದ್ದಾರೆ. ಅಶೋಕ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ರೋಧಿಸುತ್ತಿರುವ ಕುಟುಂಬ ವರ್ಗ

ಭಾಳ್ ಒಳ್ಳೆವ್ ಇದ್ದ.. ಶತ್ರುಗಳ್ಯಾರು ಇರಲಿಲ್ಲ….

ಕಲಬುರಗಿ ಬಸ್ ನಿಲ್ದಾಣ ಮುಂಭಾಗದಲ್ಲಿ ಗುರುವಾರ ಹತ್ಯೆಗೀಡಾದ ಬಸವರಾಜ ಭಾಳ್ ಒಳ್ಳೆವ್ ಇದ್ದನ್ರಿ.. ಯಾರೊಂದಿಗೂ ಜಗಳ ಸಹ ಅಡ್ತಿರಲಿಲ್ಲ, ಅವ್ನಿ ಯಾರು ದುಷ್ಮನ್ಗಳು ಇರಲಿಲ್ಲ. ನಮ್ಮೂರಿನ ಯಾರ್ ಮ್ಯಾಲೂ ಸಂಶಯವಿಲ್ಲರ್ರಿ.. ಚಿನ್ನದಂತಾ ಹುಡುಗ, ಹಿಂಗ್ಯಾಂಡ್ ಹೊಡದಾರ್ರಿ… ಅವ್ರಿ ಬರ್ಬಾರ್ದು ಬರ್ಲಿ… ಅಂವಾ ಯಾರಿಗೂ ಕೆಟ್ಟದ್ದೂ ಮಾಡಿದಂವಲ್ಲರಿ ಎಂದು ಹೇಳುತ್ತಿದ್ದ ಬಸವರಾಜ ಅತ್ತೆ ಚಂದ್ರಕಲಾ ಹಾಗೂ ಹಿರಿಯ ಸಹೋದರಿ ಮಹಾನಂದ ಹಾಗೂ ಕುಟುಂಬದವರ, ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿತ್ತು. ಇನ್ನಾ ನನ್ನ ಮಗಳು ಸಣ್ಣಾಕಿರಿ, ಈಗ ಚೊಚ್ಚಲ ಹೊಟ್ಟಲಿ ಹಾಳ್ರಿ… ಬರೋ 8 ನೇ ತಾರೀಖಿಗಿ ಕುಬಸ (ಸೀಮಂತ) ಮಾಡ್ಲಿಕ್ ಎಲ್ಲರು ಸೇರಿ ನಿರ್ಧಾರ ಮಾಡಿದ್ವಿರಿ, ಅಷ್ಟರಾಗ ಹಿಂಗಾ ಆಗತರಲ್ಲ್ರಿ, ನನ್ನ ಮಗಳ ಗತಿ ಹ್ಯಾಂಗರಿ… ಎಂದು ಚಂದ್ರಕಲಾ ರೋಧಿಸುತ್ತಿದ್ದರೆ ಎಂತಹವರ ಕರಳು ಚುರ್ರ್ ಅನ್ನದೆ ಇರದು. ಸೇರಿದ್ದ ಜನರು ಮಮ್ಮಲು ಮರುಗುತ್ತಿದ್ದರು. ಜಿಮ್ಸ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ನಡೆಸುವ ಕೊಠಡಿಯ ಬಳಿಯಲ್ಲಿ ಜಮಾಗೊಂಡಿದ್ದ ಊರಿನ ಜನರು, ಆತನ ಸ್ನೇಹಿತರು ಹೀಗೆ ಎಲ್ಲರದ್ದೂ ಒಂದೇ ಆತ ಬಾಳ್ ಚೋಲೋ ಇದ್ದನ್ರಿ ಹಿಂಗ್ಯಾದ್ ಅಂದ್ರ ನಂಬ್ಲಿಕ್ಕ್ ಆಗವಲ್ದು ಎಂದು ಬಾಬುರಾವ ಪೊಲೀಸಪಾಟೀಲ್ ಇನ್ನಿತರರು ಹೇಳಿಕೊಂಡರು.

ಬೆಳಗ್ಗೆನೇ ಮಾತನಾಡಿದ್ದನ್ರಿ.. ಊರಿಗೆ ಬರ್ತಿನಿ ಅಂದಿದ್ದ, ಅಷ್ಟರಾಗ ಹಿಂಗ್ ಆಗ್ಯಾದ. ಎರಡು ವರ್ಷದಿಂದ ಲಾಡ್ಜ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮತ್ತ ಹೊಳ್ಳಿ ಮಾಡಿದ್ದ, ರಿಸಿವ್ ಮಾಡಲಿಲ್ಲ. ಮಾಡಿದ್ರ ಏನ್ ಅಂತ ಹೇಳತ್ತಿದ್ದ. ಆದ್ರ, ನಂತರ ಹಿಂಗ್ ಅಂತ ಗೊತ್ತಾತಿರಿ ಯಾರ್ ಹೊಡದರಂತಾನೂ ಗೊತ್ತಿಲ್ಲ. ನಮ್ಮ ಅಣ್ಣಗ ಹೊಡಿಯುವಂತಾ ಕೆಲ್ಸ್ ಮಾಡಂವಲ್ರಿ…
| ಸಿದ್ದರಾಮ ಕೊಲೆಯಾದ ಬಸವರಾಜನ ಸಹೋದರ