14ರಂದು ಕಾಳಹಸ್ತೇಂದ್ರ ಶ್ರೀ ಸೀಮೋಲ್ಲಂಘನ

ಪಡುಬಿದ್ರಿ: ಕಟಪಾಡಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಾಚರಣೆ ಸೀಮೋಲ್ಲಂಘನ ಹಾಗೂ ಸಮಾರೋಪ ಪಡುಕುತ್ಯಾರಿನ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದಲ್ಲಿ ಸೆ.14ರಂದು ನಡೆಯಲಿದೆ.

ಮುಂಜಾನೆ 5ಕ್ಕೆ ವಿಶ್ವಕರ್ಮ ಯಜ್ಞದೊಂದಿಗೆ ಕಾರ್ಯಕ್ರಮ ಆರಂಭಗೊಂಡು ಕಟಪಾಡಿ ಮಣಿಪುರ ನದಿ ತಟದಲ್ಲಿ ಸೀಮೋಲ್ಲಂಘನ ನಡೆಯಲಿದೆ. ಬಳಿಕ ಶ್ರೀಗಳು ದಿಗ್ವಿಜಯ ಮೆರವಣಿಗೆ ಮೂಲಕ ನಿಕಟಪೂರ್ವ ಯತಿಗಳಾದ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿಮಠ ಸರಸ್ವತಿ ಪೀಠದ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮಿಯ ಕಟಪಾಡಿಯಲ್ಲಿರುವ ವೃಂದಾವನ ಸಂದರ್ಶಿಸುವರು. ನಂತರ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಮತ್ತು ಆನೆಗುಂದಿ ಮಹಾಸಂಸ್ಥಾನದಲ್ಲಿ ಪೂಜೆ ನೆರವೇರಿಸುವರು.

ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರ ಸಂದರ್ಶಿಸಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನಕ್ಕೆ ಪೂರ್ಣಕುಂಭ ಮೆರವಣಿಗೆಯಲ್ಲಿ ಪದಾರ್ಪಣೆ ಮಾಡುವರು. ಶ್ರೀಗುರುಪಾದುಕಾ ಪೂಜೆ ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಶ್ರೀ ಸರಸ್ವತಿ ಗೋ-ಪರ್ಯಾವರಣಂ ಸಂರಕ್ಷಣಾ ಟ್ರಸ್ಟ್ ಹಾಗೂ ಶೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಅಭಿವೃದ್ಧಿ ಟ್ರಸ್ಟ್‌ಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡುವರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ಅಧ್ಯಕ್ಷತೆ ವಹಿಸುವರು. ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್, ಘನಪಾಠಿ ಬಾಲಚಂದ್ರ ಭಟ್ ಚಂದುಕೂಡ್ಲು, ಜ್ಯೋತಿಷಿ ಉಮೇಶ್ ಆಚಾರ್ಯ ಪಡೀಲು ಭಾಗವಹಿಸುವರು.
ಸಮಾಜ ಸೇವಕರಾದ ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ಹಾಗೂ ವಾದಿರಾಜ ಆಚಾರ್ಯ ಕೊಂಚಾಡಿ ಅವರನ್ನು ಗೌರವಿಸಲಾಗುವುದು ಎಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *