ಆತ್ಮಶುದ್ಧಿಯಿಂದ ಜೀವನ್ಮುಕ್ತಿ

‘ತಾತಯ್ಯ’ ಎಂದೇ ವಿಖ್ಯಾತರಾದವರು ಮಹಾನ್ ಸಂತ, ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರು. ಅವರು ಜನ್ಮವೆತ್ತಿದ ಕೈವಾರ ಪುಣ್ಯಕ್ಷೇತ್ರ ದ್ವಾಪರಯುಗದಲ್ಲಿ ಏಕಚಕ್ರನಗರ ಎಂದು ಪ್ರಸಿದ್ಧವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಈ ಕೈವಾರಕ್ಷೇತ್ರದಲ್ಲಿ ಪ್ರತಿವರ್ಷ ಜ್ಯೇಷ್ಠ ಶುಕ್ಲ ತದಿಗೆಯಂದು ತಾತಯ್ಯನವರ ಆರಾಧನೆ ಜರುಗುತ್ತದೆ. ಈ ನಿಮಿತ್ತ ಅವರು ರಚಿಸಿದ ‘ಅಮರನಾರೇಯಣ ಶತಕ’ದ ಆಯ್ದ ಪದ್ಯವೊಂದರ ಅರ್ಥಪೂರ್ಣ ವ್ಯಾಖ್ಯಾನ ಇಲ್ಲಿದೆ.

| ಬಿ.ಕೆ. ಮೂರ್ತಿ

ಕರಗ ಕರಗಗ ವಚ್ಚು – ಕನಕಂಬುನಕು ವಂನ್ಯ

ತರುವ ತರುವಗ ವಚ್ಚು – ದಧಿನ ವೆನ್ನ |

ಚೂಡ ಚೂಡಗ ಚೂಪು – ಚೂಟಿಗ ಗುರಿ ತಗುಲು

ವಿನಗ ವಿನಗ ಮುಕ್ತಿವಿನಿಕೆ ವಿನುನು |

ನಡುವ ನಡುವಗ ನಟ್ಟನಡಿಭಾಟಲೋ ಚೇರು

ಅನಗ ಅನಗ ಮಾಟ – ಅಮೃತಮವುನು |

ಶಾಯ ಶಾಯಗ ಪೂಜ – ಚೇಕೂಡಿ ವಚ್ಚುನು

ತಿನಗ ತಿನಗ ಚೇದು – ತಿಯ್ಯನೌನು ||

ತತ್ತ್ವಮುಲಕೆಲ್ಲ ನಾಯಕತತ್ತ್ವಮೆರಿಗಿ |

ಮೋಹ ಶೋಕಮು ವಿಡಚಿನ – ಮುಕ್ತುಡಗುನು |

ಅಮರನಾರೇಯಣಾಚ್ಯುತ ಹರಿ ಮುಕುಂದ |

ಕಲುಷಸಂಹಾರ ಕೈವರಪುರ ವಿಹಾರ ||

ಈ ಜಗತ್ತಿನ ಜಂಜಡದಿಂದ ಮುಕ್ತರಾಗುವುದು ಹೇಗೆ? ಇದಕ್ಕೆ ದಾರಿ ತೋರುವುದೇ ತಾತಯ್ಯನವರ ಈ ಪದ್ಯದ ಉದ್ದೇಶ. ಅದನ್ನು ಪಡೆಯಲು ಪಡಬೇಕಾದ ಪ್ರಯತ್ನಗಳನ್ನು ತಿಳಿಸುವುದೇ ಈ ಪದ್ಯದ ಅಂತರಾರ್ಥ. ಜೀವಿಯ ಅಂತಿಮ ಗುರಿ ಏನು? ಮೋಕ್ಷ! ಅಂದರೆ ಪರಬ್ರಹ್ಮನೊಂದಿಗೆ ಒಂದಾಗುವುದು. ಈ ಗುರಿಯನ್ನು ತಲುಪಲು ಇರುವ ಮಾರ್ಗವೇ ಸಾಧನಾಮಾರ್ಗ; ಯೋಗಮಾರ್ಗ.

ಕರಗ ಕರಗಗ ವಚ್ಚು – ಕನಕಂಬುನಕು ವಂನ್ಯ

ತರುವ ತರುವಗ ವಚ್ಚು – ದಧಿನ ವೆನ್ನ |

ಈ ಎರಡು ಸಾಲುಗಳಲ್ಲಿ ಬಂಗಾರ ಮತ್ತು ಬೆಣ್ಣೆಗಳ ಸುಂದರ ಉದಾಹರಣೆಗಳನ್ನು ನೀಡುತ್ತ ಸಾಧನೆಯ ಫಲವನ್ನು ಅರ್ಥೈಸುತ್ತಾರೆ. ಎಲ್ಲಿಯೋ ಭೂಗರ್ಭದಲ್ಲಿ ಅಡಗಿರುವ ಚಿನ್ನದ ಅದಿರನ್ನು ತಂದು ಅದನ್ನು ಮೂಸೆಯಲ್ಲಿ ಹಾಕಿ ಕಾಯಿಸಲಾಗುತ್ತದೆ. ಅದು ಕರಗುತ್ತದೆ. ಹಂತಹಂತವಾಗಿ ಚಿನ್ನದ ಅದಿರುಗಳ ಬಣ್ಣ ಮಾಯವಾಗಿ ಕೊನೆಗೊಮ್ಮೆ ನಿಗಿನಿಗಿ ಹೊಳೆಯುವ ಬಂಗಾರವಾಗುವುದಲ್ಲವೇ? ಅದನ್ನೇ ಪುಟಕ್ಕಿಟ್ಟ ಚಿನ್ನ ಎನ್ನುವುದು. ಬೆಂಕಿಯಲ್ಲಿ ಕರಗಿ ಕರಗಿ ಕೊನೆಗೊಮ್ಮೆ ಕಣ್ಕೋರೈಸುವ ಬಣ್ಣದ ಅಮೂಲ್ಯ ಬಂಗಾರವಾಗಲಿಲ್ಲವೇ? ಅಂದರೆ ಅದರಂತೆ ಜೀವಿಯೂ ತನ್ನನ್ನು ತಾನು ಪರಿಶುದ್ಧಗೊಳಿಸಿಕೊಂಡು ಸಿದ್ಧಿಯನ್ನು ಪಡೆಯಬಹುದು. ಅಂತೆಯೇ ಗೋವಿನಿಂದ ಉತ್ಪತ್ತಿಯಾದ ಕ್ಷೀರದಲ್ಲಿ ಮೇಲುನೋಟಕ್ಕೆ ಬೆಣ್ಣೆ ಕಾಣುವುದಿಲ್ಲ. ಆ ಹಾಲು ಮೊಸರಾಗಿ ಪರಿವರ್ತನೆಗೊಂಡ ಮೇಲೆ ಮಜ್ಜಿಗೆಯಾಗುತ್ತದೆ. ಆಗಲೂ ಬೆಣ್ಣೆ ಕಾಣುವುದಿಲ್ಲ. ಮೊಸರಲ್ಲಿ ಅಡಗಿರುವ ಬೆಣ್ಣೆಯನ್ನು ಹೊರತರಬೇಕಾದರೆ ಅದನ್ನು ಕಡೆಗೋಲಿನಿಂದ ಕಡೆಯಬೇಕು. ಕಡೆಯುತ್ತ ಹೋದರೆ ಮೊಸರು ಮಜ್ಜಿಗೆಯಾಗುತ್ತದೆ. ಅದರಲ್ಲಿ ತೇಲಿಬರುತ್ತದೆ ನವನೀತ. ಅಂತೆಯೇ ಸಾಧಕನೂ ನಿರಂತರ ಸಾಧನೆ ಮಾಡುತ್ತ ಹೋದಾಗ ಕೊನೆಗೆ ಅವನಿಗೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ.

ಚೂಡ ಚೂಡಗ ಚೂಪು – ಚೂಟಿಗ ಗುರಿ ತಗುಲು

ವಿನಗ ವಿನಗ ಮುಕ್ತಿವಿನಿಕೆ ವಿನುನು |

ಇಲ್ಲಿ ನೋಟದ ಉದಾಹರಣೆಯನ್ನು ನೀಡುತ್ತ ಅದರಲ್ಲಿ ಏಕಾಗ್ರತೆ ಸಾಧಿಸಿದರೆ ಗುರಿ ತಲುಪಲು ಸಾಧ್ಯ ಎಂಬ ಅಂಶವನ್ನು ತಾತಯ್ಯನವರು ಸೂಚಿಸುತ್ತಾರೆ. ಇದಕ್ಕೊಂದು ಉತ್ತಮ ದೃಷ್ಟಾಂತವೆಂದರೆ ದ್ರೋಣಾಚಾರ್ಯರು ಧನುರ್ವಿದ್ಯೆಯನ್ನು ಕೌರವ-ಪಾಂಡವರಿಗೆ ಕಲಿಸುವಾಗಿನ ಸಂದರ್ಭ. ಧನುರ್ವಿದ್ಯೆಯನ್ನು ಕಲಿಯಲು ಬಂದ ಎಲ್ಲ ರಾಜಕುಮಾರರಿಗೂ ದ್ರೋಣಾಚಾರ್ಯರು ಗುರಿ ಕಾಣಿಸುತ್ತಿದೆಯೇ ಎಂದು ಪ್ರಶ್ನೆಯನ್ನು ಕೇಳುತ್ತಾರೆ. ದೂರದ ಮರದ ಕೊಂಬೆಯ ಮೇಲಿನ ಹಕ್ಕಿಗೆ ಗುರಿ ಇಡುವಂತೆ ಹೇಳಿದಾಗ ಕೇಳುವ ಪ್ರಶ್ನೆ ಅದು. ಅರ್ಜುನ ಮಾತ್ರ ತನಗೆ ಬೇರೇನೂ ಕಾಣುವುದಿಲ್ಲವೆಂದೂ, ತಾನು ಬಾಣ ಪ್ರಯೋಗಿಸಬೇಕಾದ ಲಕ್ಷ್ಯವಾದ ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಎಂದು ಉತ್ತರಿಸಿ ಗುರುಗಳ ಮೆಚ್ಚುಗೆ ಗಳಿಸುತ್ತಾನೆ. ಅನಂತರ ಅವನು ಬಿಟ್ಟ ಬಾಣ ನೇರ ಗುರಿ ತಲಪುತ್ತದೆ. ಈ ಸಾಲಿನ ಅರ್ಥವೆಂದರೆ ಗುರಿಯನ್ನು ನೋಡುತ್ತ ನೋಡುತ್ತ ಏಕಾಗ್ರತೆ ಉಂಟಾಗಿ ಕೊನೆಗೆ ಅಂತಿಮ ಲಕ್ಷ್ಯವನ್ನು ತಲಪಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಲೆಂದೇ ತಾತಯ್ಯ ಈ ಸಾಲನ್ನು ಬರೆದಿದ್ದಾರೆ.

‘ವಿನಗ ವಿನಗ ಮುಕ್ತಿವಿನಿಕೆ ವಿನುಗು’ ಎಂಬಲ್ಲಿಯೂ ಮತ್ತೆ ಏಕಾಗ್ರಚಿತ್ತದ ಉಲ್ಲೇಖವೇ ಬರುತ್ತದೆ. ಅಂತರಂಗದಲ್ಲಿ ಉಂಟಾಗುವ ನಾದಕ್ಕೆ ಯೋಗಶಾಸ್ತ್ರದಲ್ಲಿ ಅನಾಹತ ಎಂದು ಹೇಳುತ್ತಾರೆ. ಆಹತ ಎಂದರೆ ಬಹಿರಂಗವಾಗಿ ನಮ್ಮ ಕಿವಿಗೆ ಬೀಳುವ ಶಬ್ದ. ಓಂಕಾರವನ್ನು ಬಾಯಿಂದ ಉಚ್ಚರಿಸಿದಾಗ ಅದು ಕಿವಿಗೆ ಕೇಳುತ್ತಿರುತ್ತದೆ. ಅದನ್ನೇ ಗಮನವಿಟ್ಟು ಕೇಳುತ್ತ, ಅನಾಹತವಾಗಿ ಕೇಳಲಾರಂಭಿಸಿದರೆ ಮುಕ್ತಿಯ ಧ್ವನಿ ಕೇಳುವುದೆಂದು ಹೇಳುತ್ತಾರೆ. ಅದೇ ಆಂತರ್ಯದಲ್ಲಿ ಕೇಳಿಬರುವ ಅನಾಹತ ಓಂಕಾರನಾದ!

ಅನಗ ಅನಗ ಮಾಟ – ಅಮೃತಮವುನು |

ಶಾಯ ಶಾಯಗ ಪೂಜ – ಚೇಕೂಡಿ ವಚ್ಚುನು

ತಿನಗ ತಿನಗ ಚೇದು – ತಿಯ್ಯನೌನು ||

ಸಂಸ್ಕೃತ ಸುಭಾಷಿತ ಒಂದು ಹೀಗುಂಟು.

ಲಕ್ಷಿ ್ಮರ್ವಸತಿ ಜಿಹ್ವಾಗ್ರೇ

ಜಿಹ್ವಾಗ್ರೇ ಮಿತ್ರ ಬಾಂಧವಾಃ |

ಜಿಹ್ವಾಗ್ರೇ ಬಂಧನಂ ಪ್ರಾಪ್ತಂ

ಜಿಹ್ವಾಗ್ರೇ ಮರಣಂ ಧ್ರುವಮ್ ||

ಇದು ನಾಲಗೆಯ ಮಹಾತ್ಮೆಯನ್ನು ಹೇಳುವ ಶ್ಲೋಕ. ‘ಜಿಹ್ವಾಗ್ರೇ’ ಅಂದರೆ ‘ನಾಲಗೆಯ ತುದಿ ಭಾಗ’ ಎಂದರ್ಥ. ಅಲ್ಲಿಯೇ ಲಕ್ಷ್ಮಿಯು ನೆಲೆಸುತ್ತಾಳೆ. ಅಲ್ಲಿಯೇ ಬಂಧುಮಿತ್ರರು ಇರುತ್ತಾರೆ. ಅದರಿಂದಲೇ ಸೆರೆವಾಸವೂ ಉಂಟಾಗುವುದು. ಸಾವು ಸಹ ಅದರಿಂದಲೇ ಬರುವುದು. ಇದು ಮಾತಿನ ಮಹತ್ತ್ವವನ್ನು ತಿಳಿಸುವ ಸುಂದರ ಸುಭಾಷಿತ.

ತಾತಯ್ಯನವರು ಮಾತಿನ ಮಹತ್ತ್ವವನ್ನೇ ಮೊದಲ ಸಾಲಿನಲ್ಲಿ ತಿಳಿಸಿದ್ದಾರೆ. ‘ಅನಗ ಅನಗ ಮಾಟ’ ಅಂದರೆ ಮಾತುಗಳನ್ನು ನುಡಿಯುತ್ತ ನುಡಿಯುತ್ತ ಅದು ಅಮೃತವಾಗುವುದು. ಅಮೃತ ಅಂದರೆ ಸಾವಿಲ್ಲದ್ದು ಎಂದರ್ಥ. ಯಾವ ಬಗೆಯ ಮಾತುಗಳನ್ನಾಡಿದರೆ ಆ ಬಗೆಯ ವ್ಯಕ್ತಿತ್ವ ಉಂಟಾಗುವುದು? ಅಶ್ಲೀಲ, ಅವಾಚ್ಯ ಮಾತುಗಳನ್ನಾಡಿದರೆ ಕೆಟ್ಟ ಮನುಷ್ಯನಾಗುತ್ತಾನೆ. ಅಮೃತವಾಕ್ಕುಗಳನ್ನಾಡುತ್ತಿದ್ದರೆ ಶ್ರೇಷ್ಠನಾಗುತ್ತಾನೆ. ಯೋಗಿಯೂ ಧಾರ್ವಿುಕನೂ ಆಡುವ ಸುಸಂಸ್ಕೃತ ಭಾಷೆಯಿಂದ ಅವನು ಸುಸಂಸ್ಕೃತನಾಗುತ್ತಾನೆ. ಅದರಿಂದ ಯೋಗಿಗೆ ವಾಕ್ಸಿದ್ಧಿಯೂ ದೊರೆತು ಅವನು ನುಡಿದಿದ್ದೆಲ್ಲ ನಿಜವಾಗಿಯೇ ಪರಿಣಮಿಸುತ್ತದೆ. ಆದ್ದರಿಂದ ಅವನ ಬಳಿ ಕೆರಳಿಸುವಂಥ, ಕೋಪ ಬರಿಸುವಂಥ ಪದಪ್ರಯೋಗ ಮಾಡಬಾರದು, ಭಯ-ಭಕ್ತಿ, ವಿನಯ-ವಿಧೇಯತೆಗಳಿಂದ ನಡೆದುಕೊಳ್ಳಬೇಕೆಂಬ ಅಲಿಖಿತ ನಿಯಮವೇ ಉಂಟು. ಅಂಥವರನ್ನೇ ಅವರ ‘ನಾಲಗೆಯ ಮೇಲೆ ಮಚ್ಚೆ ಇದೆ. ಅವರು ನುಡಿದಂತೆ ನಡೆಯುವುದು’ ಎಂದು ಹೇಳುವುದುಂಟು. ಹೀಗಾಗಿ ಉತ್ತಮವಾದ ಅಮೃತಸಮಾನವಾದ ಮಾತುಗಳನ್ನಾಡುತ್ತಿದ್ದರೆ ಅದು ಅಮೃತವಾಗುವುದು. ಇಂದಿಗೂ ಸುಭಾಷಿತಗಳೂ ಮಹಾತ್ಮರ ನುಡಿಗಳೂ ಶಾಶ್ವತವಾಗಿರುವುದನ್ನು ನಾವು ಕಾಣಬಹುದು.

ಇಲ್ಲಿನ ಎರಡನೆಯ ಸಾಲು ‘ಶಾಯ ಶಾಯಗ ಪೂಜ ಚೇಕೂಡಿ ವಚ್ಚುನು’ ಎಂಬುದಾಗಿದೆ. ಭಗವಂತನಿಗೆ ಜನ ಪೂಜೆ ಸಲ್ಲಿಸುವುದುಂಟು. ಅವರು ಬಯಕೆಯನ್ನು ಇಟ್ಟುಕೊಂಡು ಪೂಜೆ ಮಾಡಿ ಫಲ ದೊರಕದೆ ಹೋದರೆ ನಿಂದಿಸುವುದೂ ಉಂಟು. ಅದು ಸರಿಯಾದ ಚಿಂತನೆಯಲ್ಲ. ಪೂಜೆ ಎಂದರೆ ಭಕ್ತಿ, ಶ್ರದ್ಧೆಗಳಿಂದ ಮಾಡಬೇಕಾದದ್ದು. ಅವುಗಳಿಲ್ಲದ ಪೂಜೆ ಪೂಜೆಯೇ ಅಲ್ಲ. ಹೀಗೆ ಭಕ್ತಿ ಶ್ರದ್ಧೆಗಳಿಂದ ಅವಿರತವಾಗಿ ಮಾಡುತ್ತ ಹೋಗುವ ಪೂಜೆಯು ಕೊನೆಗೆ ಸಿದ್ಧಿಯನ್ನು ತರುತ್ತದೆ. ಈ ಸರಳ ವಾಕ್ಯದಲ್ಲಿ ಪೂಜೆಯನ್ನು ನಿಯತವಾಗಿ ಹಾಗೂ ಅವಿರಾಮವಾಗಿ ಮಾಡುವುದರಿಂದ ಫಲ ದೊರೆಯುವುದೆಂಬ ಖಚಿತ ಸಂಗತಿಯನ್ನು ತಾತಯ್ಯನವರು ತಿಳಿಸಿದ್ದಾರೆ.

‘ತಿನಗ ತಿನಗ ಚೇದು ತಿಯ್ಯನೌನು’ ಎಂಬ ಮಾತಿನ ಅರ್ಥ ಕಹಿಯಾದ ಬೇವಿನ ಸೊಪ್ಪು ತಿನ್ನುತ್ತ ತಿನ್ನುತ್ತ ಬೆಲ್ಲದಂತಾಗುವುದು ಎಂದಲ್ಲ. ಅದನ್ನು ಸತತವಾಗಿ ತಿನ್ನುತ್ತ ಹೋದರೆ ಅದೇ ನಾಲಗೆಯ ಹಿತವಾಗುವುದು. ನಾಲಗೆ ಅದನ್ನೇ ಒಪ್ಪಿಕೊಳ್ಳುವಂತಾಗುವುದು. ಇದರ ತಾತ್ಪರ್ಯವೇನೆಂದರೆ ಮನಸ್ಸಿಗೆ ಒಗ್ಗದ ಸಂಗತಿಯನ್ನು ಪದೇಪದೆ ಸತತವಾಗಿ ಮಾಡುವುದರಿಂದ ಕೊನೆಗೆ ಅದೇ ಇಷ್ಟವಾಗುತ್ತದೆ. ಮೊದಮೊದಲು ವ್ಯಾಯಾಮ ಕಹಿ ಎನಿಸಿದರೂ ಅದನ್ನೇ ನಿಯತವಾಗಿ ಮಾಡುವುದರಿಂದ ಅನಂತರ ಅದೆಷ್ಟು ಒಗ್ಗಿಹೋಗುವುದೆಂದರೆ ಅದನ್ನು ಬಿಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಹಾಗೆಯೇ ಪ್ರಾಣಾಯಾಮ ಮುಂತಾದ ಯೋಗಸಾಧನೆಗಳಿಗೂ ಈ ಮಾತು ಅನ್ವಯಿಸುತ್ತದೆ. ಮೊದಲಿಗೆ ಕಷ್ಟಕರವೆನಿಸುವ ಯೋಗಸಾಧನೆಯು ಅಂತಿಮವಾಗಿ ಬ್ರಹ್ಮಾನಂದದ ಅನುಭೂತಿಯನ್ನು ತಂದುಕೊಡುವುದು. ಅದೇ ಕಹಿ ಸಿಹಿಯಾಗುವ ಪರಿ! ಅದೇ ತಾತಯ್ಯನವರು ಬೇರೆಡೆ ಹೇಳುವ ಪರಬ್ರಹ್ಮ ಸಾಕ್ಷಾತ್ಕಾರ, ಜೀವಬ್ರಹೈಕ್ಯ ಸಿದ್ಧಿ, ಆತ್ಮಾನುಭೂತಿ.

ತತ್ತ್ವಮುಲಕೆಲ್ಲ ನಾಯಕತತ್ತ್ವಮೆರಿಗಿ |

ಮೋಹ ಶೋಕಮು ವಿಡಚಿನ – ಮುಕ್ತುಡಗುನು |

ಎಷ್ಟೋ ಅಧ್ಯಾತ್ಮಸಿದ್ಧಾಂತಗಳಿವೆ. ತಾತಯ್ಯನವರು ಆ ತತ್ತ್ವಗಳಲ್ಲೆಲ್ಲ ಮಕುಟಮಣಿಯಂಥ ನಾಯಕತ್ವವನ್ನು ಕುರಿತು ಇಲ್ಲಿ ಹೇಳುತ್ತಾರೆ. ಯಾವುದು ಆ ನಾಯಕತತ್ತ್ವ? ಅದೇ ಬ್ರಹ್ಮತತ್ತ್ವ! ತಾತಯ್ಯನವರು ಎಲ್ಲೆಡೆ ವಿವರಿಸಿರುವ ಪರಮತತ್ತ್ವವೆಂದರೆ ಬ್ರಹ್ಮತತ್ತ್ವ. ‘ಬ್ರಹ್ಮಮು ನೀವೇ ರಾ, ಜೀವಾ ಬ್ರಹ್ಮಮು ನೀವೇರಾ’ ಎಂದು ತತ್ತ್ವಮಸಿ ಎಂಬ ಉಪನಿಷತ್ ವಾಕ್ಯವನ್ನು ತಮ್ಮ ಕೀರ್ತನೆಯಲ್ಲಿ ಪ್ರತಿಧ್ವನಿಸಿರುವ ತಾತಯ್ಯನವರು ದೇಹಾತ್ಮಭಾವದಿಂದ ಮುಕ್ತರಾಗಿ ಬ್ರಹ್ಮಭಾವವನ್ನು ತಳೆಯುವುದೇ ವೇದಾಂತ ಸಂದೇಶವೆನ್ನುತ್ತಾರೆ. ಈ ಬಗೆಯ ಬ್ರಹ್ಮಭಾವವನ್ನು ಸಿದ್ಧಿ ಮಾಡಿಕೊಂಡ ಸಾಧಕನಿಗೆ ದೇಹಸಂಬಂಧ ಶೋಕ-ಮೋಹಗಳು ಬಿಟ್ಟುಹೋಗುತ್ತವೆ. ಅಂದರೆ ತತ್ತ್ವಗಳಲ್ಲೆಲ್ಲ ತತ್ತ್ವರಾಜನಂತಿರುವ ಅಹಂ ಬ್ರಹ್ಮಾಸ್ಮಿ ಎಂಬ ಉಪನಿಷತ್ ಸಂದೇಶವನ್ನು ತನ್ನದಾಗಿ ಮಾಡಿಕೊಂಡವನಿಗೆ ಜೀವನ್ಮುಕ್ತಿ ದೊರೆಯುವುದೆಂಬ ಮಹಾನ್ ಸಂದೇಶವನ್ನು ನೀಡುವುದರ ಮೂಲಕ ತಾತಯ್ಯನವರು ಈ ಪದ್ಯವನ್ನು ಕೊನೆ ಮುಟ್ಟಿಸುತ್ತಾರೆ.

ಕೈವಾರ ತಾತಯ್ಯ

ಕೈವಾರದ ಮುದ್ದಮ್ಮ-ಕೊಂಡಪ್ಪ ದಂಪತಿಗೆ ಕುಲದೇವತೆ ಅಮರನಾರಾಯಣನ ಕೃಪೆಯಿಂದ ಕ್ರಿ.ಶ. 1726ರಲ್ಲಿ ಜನಿಸಿದವರು ಯೋಗಿ ನಾರೇಯಣ. ಜನ್ಮನಾಮ ನಾರಾಣಪ್ಪ. ತಂದೆ-ತಾಯಿ ದೈವಭಕ್ತರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡು ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದ ನಾರಾಣಪ್ಪ ಸದಾ ಅಧ್ಯಾತ್ಮಚಿಂತನೆಯಲ್ಲಿ ಮಗ್ನನಾಗಿರುತ್ತಿದ್ದ. ಪ್ರೌಢವಯಸ್ಕನಾದಾಗ ಸೋದರತ್ತೆಯ ಮಗಳ ಜತೆ ವಿವಾಹವಾಯಿತು. ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ದಾಂಪತ್ಯದಲ್ಲಿ ವಿರಸವುಂಟಾಯಿತು. ಅದೊಂದು ದಿನ ಎತ್ತಲೋ ಹೋಗುತ್ತಿರುವಾಗ ದಿವ್ಯತೇಜಸ್ಸಿನ ಮುನಿಗಳೊಬ್ಬರಿಂದ ‘ಓಂ ನಮೋ ನಾರಾಯಣಾಯ’ ಎಂಬ ಬೀಜಾಕ್ಷರ ಮಂತ್ರದ ಉಪದೇಶ ಪಡೆದರು. ‘ಬಾಯಲ್ಲಿ ಬೆಣಚುಕಲ್ಲು ಇಟ್ಟುಕೊಂಡು ಅದು ಕಲ್ಲುಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು. ಶ್ರೀಹರಿಯ ಕೃಪಾಕಟಾಕ್ಷದಿಂದ ಯೋಗಸಿದ್ಧಿ ಹೊಂದುವೆ’ ಎಂದು ಮುನಿಗಳು ಹರಸಿದ್ದರು. ಅನಂತರ ನರಸಿಂಹಗುಹೆಯಲ್ಲಿ ಕುಳಿತು ಬೀಜಾಕ್ಷರಮಂತ್ರ ಜಪಿಸುವಾಗ ಅದು ‘ಓಂ ನಮೋ ನಾರೇಯಣಾಯ’ ಎಂದು ಉಚ್ಚಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾದರು. ಆಗ, ‘ಅದನ್ನೇ ಮುಂದುವರಿಸು. ನೀನು ಯೋಗಿ ನಾರೇಯಣ ಎಂದೇ ಹೆಸರಾಗುವೆ’ ಎಂದು ಅಶರೀರವಾಣಿಯಾಯಿತು. ಮೂರು ವರ್ಷಗಳ ಕಠಿಣ ತಪಸ್ಸಿನ ಫಲವಾಗಿ ಬೆಣಚುಕಲ್ಲು ಸಕ್ಕರೆಯಾಗಿತ್ತು. ಮುಂದೆ ಜನತೆಗೆ ವೇದಾಂತದ ವಿಷಯಗಳನ್ನು, ಆಧ್ಯಾತ್ಮಿಕ ರಹಸ್ಯಗಳನ್ನು ಬೋಧಿಸುತ್ತ ಅನೇಕ ಪವಾಡಗಳನ್ನು ಮಾಡಿದರು ತಾತಯ್ಯ. ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದ ಅವರು ಕ್ರಿ.ಶ. 1836ರಲ್ಲಿ ಸಮಾಧಿಸ್ಥರಾದರು.

(ಪ್ರತಿಕ್ರಿಯಿಸಿ: [email protected])

(ಸೂಚನೆ: ಅನಿವಾರ್ಯ ಕಾರಣಗಳಿಂದ ಈ ವಾರ ನಿಯತ ಅಂಕಣಗಳು ಪ್ರಕಟವಾಗಿಲ್ಲ.)

Leave a Reply

Your email address will not be published. Required fields are marked *