ಸಾಗರ: ಸಾಗರದ ಜೋಸೆಫ್ ನಗರದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸ್ವಗೃಹಕ್ಕೆ ಎನ್.ಆರ್.ಪುರ ತಾಲೂಕಿನ ನಾರಾಯಣಗುರು ಸೇವಾ ಸಂಘದ ಸದಸ್ಯರು ಗುರುವಾರ ಭೇಟಿ ನೀಡಿ ಸನ್ಮಾನಿಸಿದರು.
ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಗೋಡು ಚಳವಳಿ ನನ್ನ ಬದುಕಿನಲ್ಲಿ ಹೋರಾಟದ ಮಾರ್ಗ ತೋರಿಸಿ ಕೊಟ್ಟಿತು. ಹೋರಾಟದ ಜತೆಗೆ ಶಿಕ್ಷಣ, ಕಾನೂನು ಪದವಿ ಪಡೆದು ನಂತರ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಲು ಪ್ರೇರಣೆಯಾಯಿತು. ಬಡವರಿಗೆ ಭೂಮಿ ಕೊಡಿಸಬೇಕು ಎನ್ನುವ ಉತ್ಸಾಹ ನನ್ನಲ್ಲಿ ಇಂದಿಗೂ ಕುಗ್ಗಿಲ್ಲ. ಇಂತಹ ಸನ್ಮಾನಗಳು ನಾನು ಅಧಿಕಾರದಲ್ಲಿದ್ದಾಗ ಮಾಡಿರುವ ಒಳ್ಳೆಯ ಕೆಲಸಕ್ಕೆ ಸಲ್ಲುತ್ತಿದೆ. ಶರಾವತಿ ಮುಳಗಡೆ ಸಂಸ್ರಸ್ತರ ಹಾಗೂ ಪಾರಂಪರಿಕ ಅರಣ್ಯಭೂಮಿ ಹಕ್ಕಿನ ಕುರಿತ ಸಮಸ್ಯೆಗಳು ಜೀವಂತವಾಗಿವೆ. ಅವುಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಕೆಲಸ ಆಗಬೇಕಿದೆ ಎಂದರು.
ಸಂಘದ ಪ್ರಮುಖ ಸದಾಶಿವ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು ನಮಗೆಲ್ಲ ಸ್ಫೂರ್ತಿದಾಯಕ. ಅವರು ಶಾಸಕರು, ಸಚಿವರಾಗಿದ್ದಾಗ ಬಡ ಜನರಿಗೆ ಭೂಮಿ ಕೊಡಿಸುವ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಮಾಡಿರುವ ಕೆಲಸಗಳು ಚಿರಸ್ಥಾಯಿ. ಕಾಯಕದ ಮೂಲಕವೇ ಕಾಗೋಡು ತಿಮ್ಮಪ್ಪ ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ರಮೇಶ್, ಪ್ರಭಾಕರ್, ಸುಕುಮಾರ್, ಶಂಕರ್, ಡಿ.ದಿನೇಶ್, ಐ.ಎನ್.ಸುರೇಶಬಾಬು ಇತರರಿದ್ದರು.