More

  ಮನದ ಉದ್ಧಾರದ ಸಾಧನಗಳು

  ದೇವಮಂದಿರ ಭಜನೆ ಪೂಜೆ ಪ್ರಸಾದಗಳು |

  ಜೀವನದಲಂಕಾರ, ಮನಸಿನುದ್ಧಾರ ||

  ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವ- |

  ದಾವುದಾದೊಡಮೊಳಿತು – ಮಂಕುತಿಮ್ಮ ||

  ‘ದೇವಮಂದಿರ, ಭಜನೆ, ಪೂಜೆ-ಪ್ರಸಾದಗಳು ಜೀವನದ ಅಲಂಕಾರ. ಇದರಿಂದಲೇ ಮನಸ್ಸಿನ ಉದ್ಧಾರ. ಮನವನ್ನು ಕ್ಷುದ್ರ ಜಗತ್ತಿನಿಂದ ಬಿಡಿಸಿ ಮೇಲೆ ಕೊಂಡೊಯ್ಯುವುದಾದರೆ ಅದು ಒಳಿತು’ ಎನ್ನುತ್ತದೆ ಈ ಕಗ್ಗ.

  ಎಂಬತ್ತು ವರ್ಷದ ವೃದ್ಧೆಯೊಬ್ಬರು, ಪ್ರತಿದಿನ ಸಂಜೆ ದೇಗುಲದ ಬೀದಿಯಲ್ಲಿ ಕೋಲೂರಿಕೊಂಡು ನಿಧಾನವಾಗಿ ನಡೆಯುತ್ತ ಹೂವಿನ ವ್ಯಾಪಾರಿಗಳಲ್ಲಿಗೆ ಹೋಗುತ್ತಿದ್ದರು. ವಿವಿಧ ಹೂವುಗಳನ್ನು ಖರೀದಿಸಿ, ದೇವಳದ ಅಂಗಣದಲ್ಲಿ ಒಂದೆಡೆ ಕುಳಿತು ಅನ್ಯ ಪರಿವೆ ಇಲ್ಲದೆ ಹೂವಿನ ಹಾರವನ್ನು ನೇಯುತ್ತಿದ್ದರು. ಜತೆಗೆ ದೇವರ ನಾಮಸ್ಮರಣೆಯೂ ನಡೆಯುತ್ತಿತ್ತು. ಹೂವಿನ ಹಾರವು ಸಿದ್ಧವಾದ ನಂತರ ಅದನ್ನು ದೇಗುಲಕ್ಕೆ ಅರ್ಪಿಸಿ ಸಂತೃಪ್ತ ಭಾವದಿಂದ ಮನೆಗೆ ಮರಳುತ್ತಿದ್ದರು. ವೃದ್ಧಾಪ್ಯದ ನಿಶ್ಯಕ್ತಿ ಇದ್ದರೂ ಅದನ್ನು ಲೆಕ್ಕಿಸದೆ, ನೇಯ್ದ ಹೂವಿನ ಹಾರವನ್ನು ದೇವರಿಗೆ ಅರ್ಪಿಸಿ ಸಂತೋಷಪಡುತ್ತಿದ್ದರು. ಇದರಿಂದ ಬಂದ ಲಾಭವೇನು ಎನಿಸಿದರೂ ಸಾರ್ಥಕಭಾವ ಅವರ ಹೃದಯವನ್ನು ತುಂಬುತ್ತಿತ್ತು. ಅವರು ತಮಗೆ ಅರಿವಿಲ್ಲದೆಯೇ ಲೌಕಿಕ ಬೇನೆ-ಬೇಸರಗಳಿಂದ ಮುಕ್ತರಾಗಿ ಜೀವೋತ್ಕರ್ಷ ಪಡೆಯುವ ಪ್ರಯತ್ನ ಮಾಡುತ್ತಿದ್ದರು.

  ಈ ಹಿರಿಯರಂತೆಯೇ ದೇವಸ್ಥಾನ, ಭಜನೆ, ಪೂಜೆ, ಪ್ರಸಾದ, ಸೇವೆ ಎಂದೆಲ್ಲ ಓಡಾಡುವ ಹಲವರನ್ನು ಕಾಣುತ್ತೇವೆ. ಇದರಿಂದ ಸಮಯವು ವ್ಯರ್ಥ, ಶಕ್ತಿಯ ಅಪವ್ಯಯವೆಂದು ಹೀಯಾಳಿಸುವವರಿದ್ದಾರೆ. ದೇವಮಂದಿರ, ಭಜನೆ, ಪೂಜೆ ಮುಂತಾದವುಗಳೆಲ್ಲ ಜೀವನದ ಸೌಂದರ್ಯವನ್ನು ಹೆಚ್ಚಿಸುತ್ತವೆ, ಜಂಜಾಟದ ಬದುಕಿಗೆ ನೆಮ್ಮದಿ ನೀಡುತ್ತವೆ. ಹಾಗೆಂದು ಅದಷ್ಟೇ ಮುಖ್ಯವಾಗಿ, ವಹಿಸಿಕೊಳ್ಳಲೇಬೇಕಾದ ಕರ್ತವ್ಯಗಳಿಂದ ವಿಮುಖರಾಗುವುದು ಸರಿಯಲ್ಲ. ಭಗವದಾರಾಧನೆಯು ವ್ಯಕ್ತಿಯ ಉದ್ಧಾರಕ್ಕಾಗಿ ಇರುವುದೇ ಹೊರತು ಭಗವಂತನಿಗೆ ನೆಲೆ ಕಲ್ಪಿಸಲಲ್ಲ. ರಕ್ಷಕನೊಬ್ಬ ಜತೆಗಿದ್ದಾನೆ ಎಂಬ ಭಾವವು ಆತ್ಮಸ್ಥೈರ್ಯ ನೀಡುತ್ತದೆ. ಆತ ಸದಾ ನಮ್ಮನ್ನು ಗಮನಿಸುತ್ತಿದ್ದಾನೆ ಎಂಬ ಅರಿವು ದೌರ್ಬಲ್ಯಗಳನ್ನು ಕಳಚುತ್ತದೆ.

  ಪ್ರತಿಯೊಬ್ಬರೂ ಪ್ರಾರ್ಥನೆ, ಅರ್ಚನೆಗಳ ಸಂದರ್ಭದಲ್ಲಿ ತಮಗೆ ಒಳಿತಾಗಲೆಂದೇ ಬೇಡಿಕೊಳ್ಳುತ್ತಾರೆ. ಆದರೆ ಹೊರಬಂದ ಮೇಲೆ ತಾವು ಯಾವುದೇ ಒಳಿತಿನ ಕೆಲಸಗಳನ್ನು ಮಾಡುವುದಿಲ್ಲ. ಯಾಕೆಂದರೆ ದೇವರ ಬಗೆಗಿನ ಅವರ ನಂಬಿಕೆಗೆ ಗಟ್ಟಿತನವಿಲ್ಲ. ತಾವೆಸಗಿದ ತಪ್ಪುಗಳನ್ನು ನಿವೇದಿಸಿಕೊಳ್ಳಲು, ಎಲ್ಲವನ್ನೂ ಭಗವಂತನ ತಲೆಗೆ ಕಟ್ಟಿ ನಿರಾಳವಾಗಲು ಅಥವಾ ಸ್ವಾರ್ಥಸಾಧನೆಗಾಗಿ ಅವರಿಗೆ ದೇವಮಂದಿರ, ಪೂಜೆ ಪುನಸ್ಕಾರಗಳು ಬೇಕೇ ಹೊರತು ಮನಸಿನ ಉದ್ಧಾರದ ಕಲ್ಪನೆಯೂ ಇಲ್ಲ. ಹಾಗಾಗಿ ದೇವತಾರ್ಚನೆಯ ಕ್ರಿಯೆಗಳಲ್ಲಿ ತನ್ಮಯರಾಗುವುದೇ ಇಲ್ಲ. ಅವರ ಆರಾಧನೆ ನಾಟಕೀಯವಾಗಿಬಿಡುತ್ತದೆ. ಹರಕೆ ಒಪ್ಪಿಸಲೇಬೇಕು ಎಂಬ ನಿಲುವಿನಿಂದಲೋ, ತೊಂದರೆಯಾಗಬಹುದೆಂಬ ಭಯಕ್ಕೋ ಭಕ್ತಿಯ ನಟನೆ ಮಾಡುತ್ತಾರೆ. ಹೀಗಾಗಿ ಜೀವನ ಇನ್ನಷ್ಟು ಅಪರಿಚಿತವಾಗಿಬಿಡುತ್ತದೆ, ವ್ಯಕ್ತಿಯೂ ಒತ್ತಡದಲ್ಲಿ ಬಾಳುತ್ತಾನೆ.

  ಭಜನೆ, ಪೂಜೆ, ಪ್ರಸಾದ, ಜಪ, ಸಾಧನೆಗಳು ಜೀವದ ಉದ್ಧಾರಕ್ಕಾಗಿ ಅತ್ಯಗತ್ಯ. ಎಷ್ಟು ಜನರು ಜತೆಗಿದ್ದರೂ ಬಾಳಿನ ಹೋರಾಟದಲ್ಲಿ ವ್ಯಕ್ತಿಯೊಬ್ಬನೇ ಪಾಲ್ಗೊಳ್ಳಬೇಕು. ಕ್ಷಣಿಕ ಸುಖಗಳ ಆಕರ್ಷಣೆಗೆ ಒಳಗಾಗದೆ, ಕ್ಷುಲ್ಲಕ ಕಾರಣಗಳಿಗೆ ಬಾಳನ್ನು ಹಾಳುಗೆಡಹದೆ, ಅಮೂಲ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ದೇವತಾರ್ಚನೆ, ಭಜನೆ, ಹೋಮ-ಹವನಾದಿಗಳು ಪ್ರೇರಕವಾಗುತ್ತವೆ. ಇದರಿಂದ ಮನಸ್ಸು ಶಾಂತವಾಗುವುದರೊಂದಿಗೆ ಬಾಳಿನ ಉದ್ದೇಶ ಸ್ಪಷ್ಟವಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts