More

  ಕಗ್ಗದ ಬೆಳಕು: ಜೀವೋತ್ಕರ್ಷದ ಶೋಧನೆ 

  ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- |

  ನನುಭವದ ಹಿಂದೆ, ಸೃಷ್ಟಿಯ ನೆರಳ ಹಿಂದೆ ||

  ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |

  ಮನುಜನೊಳ ಹಿರಿಮೆಯದು – ಮಂಕುತಿಮ್ಮ ||

  ‘ತನಗಿಂತ, ಈ ಪ್ರಪಂಚಕ್ಕಿಂತ ಹಿರಿದಾದ, ಅನುಭವಕ್ಕೆ ನಿಲುಕದ ಹಿರಿದೊಂದರ ಹಿಂದೆ, ಸೃಷ್ಟಿಯ ನೆರಳಿನ ಹಿಂದೆ ಒಂದು ಶಕ್ತಿ ಇದೆ. ಆ ಶಕ್ತಿಯ ಬಗೆಗೆ ಅನುಮಾನಪಟ್ಟು, ಮನುಜನು ಅನ್ವೇಷಣೆಗೆ ಹೊರಟಿದ್ದಾನೆ. ಅದು ಆತನೊಳಗಿರುವ ಹಿರಿಮೆ’ ಎನ್ನುತ್ತದೆ ಈ ಕಗ್ಗ.

  ಮನುಷ್ಯ ಪ್ರಕೃತಿಯನ್ನು ತಿಳಿಯಲು ಯತ್ನಿಸತೊಡಗಿದ ಆರಂಭಕಾಲದಲ್ಲೇ, ತನ್ನ ಶಕ್ತಿಗೂ ಮೀರಿದ, ಅರಿವಿಗೆ ಅಳವಡದ ಅವ್ಯಕ್ತ ಶಕ್ತಿ ಏನಾದರೂ ಇರಬಹುದೇ ಎಂಬ ಸಂಶಯಕ್ಕೆ ಒಳಗಾಗಿದ್ದ. ಯಾಕೆಂದರೆ ಆತನ ನಿಯಂತ್ರಣಕ್ಕೆ ಸಿಗದ, ಮತಿಗೆ ಅರ್ಥವಾಗದ ಅನೇಕ ಪ್ರಾಕೃತಿಕ ಪವಾಡಗಳು ಕಣ್ಮುಂದೆಯೇ ನಡೆಯುತ್ತಿದ್ದವು.

  ನಿಯತವಾದ ಸೂರ್ಯೋದಯ-ಸೂರ್ಯಾಸ್ತ, ಸುರಿವ ಮಳೆ, ಹೊಳೆವ ಮಿಂಚು, ಎದೆ ನಡುಗಿಸುವ ಸಿಡಿಲು, ಭೂಕಂಪ, ಬಿರುಗಾಳಿ ಹೀಗೆ ಹಲವು ವಿಚಿತ್ರಗಳ ಆಗರವಾಗಿರುವ ನಿಸರ್ಗವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಮನುಷ್ಯ ತನಗಿಂತ ಹಿರಿದಾದ, ತಿಳಿವಳಿಕೆಗೂ ಮೀರಿದ ಶಕ್ತಿಯ ಬಗೆಗೆ ಚಿಂತಿಸತೊಡಗಿದ. ನಿರಂತರ ಶೋಧನೆಯ ಫಲವಾಗಿ ಅನನ್ಯ ಶಕ್ತಿಯಿದೆ ಎಂದರಿತು, ಆ ಶಕ್ತಿಯನ್ನು ದೇವರೆಂದು ಪೂಜಿಸತೊಡಗಿದ.

  ಇತರ ಪ್ರಾಣಿ-ಪಕ್ಷಿಗಳಂತೆ ತಿಂದುಂಡು ಪವಡಿಸುವುದಷ್ಟೇ ಮನುಷ್ಯನ ಬಾಳಿನ ರೀತಿಯಲ್ಲ. ಅವನೊಳಗಿನ ವಿವೇಚನೆ ಕ್ರಿಯಾಶೀಲವಾಗುತ್ತದೆ. ಆದ್ದರಿಂದ ಪರಿಸರದ ಘಟನೆಗಳ ಕುರಿತ ಸಂದೇಹವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತ, ಭೂಮಿಗಿಂತ ಹಿರಿದಾದ ಚೈತನ್ಯವೊಂದಿರುವುದನ್ನು ಆತ ಮನಗಂಡ. ಆದರೆ ಆ ಶಕ್ತಿ ಇಂದ್ರಿಯಾನುಭವಗಳನ್ನೂ ಮೀರಿದ್ದು. ಭಾವಕ್ಕೆ, ಮಾತಿಗೆ ಸಿಕ್ಕದ ಶಕ್ತಿಯ ಬಗ್ಗೆ ವಿವರಿಸಲು ಅಸಾಧ್ಯ ಎಂಬ ಸ್ಥಿತಿಗೆ ತಲುಪಿದ.

  ಪೂರ್ತಿ ಸೃಷ್ಟಿಯೇ ಆ ಶಕ್ತಿಯ ನೆರಳಿನಂತೆ ಭಾಸವಾಗುತ್ತದೆ. ನದಿ, ಸಾಗರ, ಆಕಾಶ, ವಿವಿಧ ಬಗೆಯ ತರು-ಲತೆಗಳು, ಖಗ-ಮಿಗಗಳು ಹೀಗೆ ಜೀವಜಾಲವೆಲ್ಲದರ ಜೀವನ, ಅಳಿವು-ಉಳಿವುಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತಿರುವ ಅಗೋಚರ ಶಕ್ತಿಯ ವ್ಯಾಪಕತೆಯನ್ನು ಅರ್ಥಮಾಡಿಕೊಂಡ. ಆ ಶಕ್ತಿ ಪೂರ್ತಿ ಭುವನವನ್ನೇ ಕಾಪಾಡುತ್ತಿದೆ ಎಂದರಿತು ಶರಣಾದ.

  ಹೀಗೆ ಮಾನವನು ನೂರಾರು ಕೌತುಕಗಳನ್ನು ಹೊತ್ತಿರುವ ಪ್ರಕೃತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ. ಪ್ರಕೃತಿಯಲ್ಲಿರುವ ಸಮನ್ವಯತೆಗೆ, ಸಂಯೋಜನೆಗೆ ಕಾರಣವೇನು ಎಂದು ಪ್ರಶ್ನಿಸಿಕೊಂಡ. ಯಾವುದೋ ಅಗೋಚರ ಶಕ್ತಿ ಇರಬಹುದೇ ಎಂದು ಹುಡುಕಾಡತೊಡಗಿದ. ಈ ಹುಡುಕಾಟದಲ್ಲಿ ಸತ್ಯವನ್ನರಿಯುವ ತುಡಿತವಿತ್ತು.

  ಸತ್ಯದ ಬಗೆಗೆ ಪೂರ್ವಾಗ್ರಹಪೀಡಿತ ಮನಸ್ಸು ಸತ್ಯವನ್ನೆಂದಿಗೂ ಒಪ್ಪಿಕೊಳ್ಳದು, ಅದು ಶೋಧನೆಗೆ ಹೊಡುವ ಮೊದಲೇ ಎಲ್ಲವೂ ಪುರುಷಪ್ರಯತ್ನದಿಂದ ಎಂದು ನಿರ್ಧರಿಸಿಯೇ ಹೊರಡುವುದರಿಂದ, ಹುಡುಕಾಟವೆಂಬುದು ಬಯಲ ಅಲೆದಾಟವಾಗುತ್ತದೆ. ಪರಿಶುದ್ಧ ಮನಸ್ಸಿನ ಅನ್ವೇಷಣೆಯಿಂದಾಗಿ ಭಗವಂತನ ಕುರಿತಾದ ಜ್ಞಾನವು ಅನೇಕ ಮಹಿಮಾನ್ವಿತರಿಗೆ ಪ್ರಾಪ್ತವಾಗಿದೆ. ಅವರು ತಮ್ಮ ಅರಿವಿನ ಬೆಳಕಿನಲ್ಲಿ ಪಾಮರರನ್ನೂ ಮುನ್ನಡೆಸುವ ಹಿರಿಮೆ ತೋರಿದ್ದಾರೆ.

  ಯಾವಾಗ ಮೌಡ್ಯ ಕಳೆದುಕೊಂಡು, ನಿಸರ್ಗದೊಳಗಿರುವ ಶಕ್ತಿಯನ್ನು ಅಂತರಂಗದ ಕಂಗಳಿಂದ ಕಾಣತೊಡಗುತ್ತಾನೋ ಆಗ ಆತನ ಶೋಧನೆಯೇ ಜೀವೋತ್ಕರ್ಷವಾಗುತ್ತದೆ. ಈ ಹಿಂದೆ ಇದ್ದ ಅವೆಷ್ಟೋ ಋಷಿಮುನಿಗಳು, ದಾರ್ಶನಿಕರು, ಅನುಭಾವಿಗಳು ಇಂಥ ಅನ್ವೇಷಣೆಗೆ ಹೊರಟು, ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಿರುವುದಷ್ಟೇ ಅಲ್ಲ , ಲೋಕೋದ್ಧಾರಕ್ಕೂ ಶ್ರಮಿಸಿದ್ದಾರೆ. ಬದುಕಿನ ಬೆರಗುಗಳಿಗೆ ಮೂಕರಾಗುವುದು ಸಹಜ. ಆದರೆ ಅದಕ್ಕೆ ಕಾರಣವೇನೆಂದು ಶುದ್ಧ ಮನಸ್ಸಿನಿಂದ ಅನ್ವೇಷಿಸುವ, ಉತ್ತರ ಪಡೆಯುವ ಹಂಬಲವು ವ್ಯಕ್ತಿತ್ವವನ್ನು ಉನ್ನತವಾಗಿಸುತ್ತದೆ, ಮನುಜನಲ್ಲಿನ ಈ ಹಿರಿಮೆಯೇ ಜಗತ್ತಿನ ಪ್ರಗತಿಗೆ ಕಾರಣವಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts