More

  ಕಗ್ಗದ ಬೆಳಕು: ಈ ಜಗವ ಗೆಲ್ಲುವುದು ಹೇಗೆ? 

  ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |

  ಸರ್ವವನು ತನ್ನಾತ್ಮವೆಂದು ಬದುಕುವನು ||

  ನಿರ್ವಿಕಾರಾಂತರಂಗದಿ ಜಗವ ಧರಿಸುವನು |

  ಸರ್ವಮಂಗಳನವನು – ಮಂಕುತಿಮ್ಮ ||

  ‘ಸೃಷ್ಟಿಯೊಳಗೆ ಸಾರ್ವಭೌಮನು ಒಬ್ಬನೇ ನೋಡು. ಆತನು ಎಲ್ಲವನ್ನೂ ತನ್ನ ಆತ್ಮವೆಂದು ತಿಳಿದು ಬದುಕುತ್ತಾನೆ. ವಿಕಾರವಿಲ್ಲದೆ ಶುದ್ಧ ಮನಸ್ಸಿನಿಂದ ಜಗದ ಜೀವನವನ್ನು ಹೊರುತ್ತಾನೆ. ಅವನು ಎಲ್ಲರಿಗೂ ಮಂಗಳವಾಗುವಂತೆ ಶ್ರಮಿಸುತ್ತಾನೆ’ ಎನ್ನುತ್ತದೆ ಈ ಕಗ್ಗ.

  ವಿಶಾಲ ಭೂಪ್ರದೇಶವನ್ನು ಗೆದ್ದು ತನ್ನ ಆಳ್ವಿಕೆಗೆ ಒಳಪಡಿಸಿದ ಪರಾಕ್ರಮಿಯನ್ನು ಸಾರ್ವಭೌಮ ಎಂದು ಕರೆಯುವುದು ವಾಡಿಕೆ. ಹೀಗೆ ಮೆರೆದ ಸಾರ್ವಭೌಮರನೇಕರ ಕತೆಗಳು ಚರಿತ್ರೆಯ ಪುಟಗಳಲ್ಲಿ ಗುರುತಾಗಿ ಉಳಿದಿವೆ. ಆದರೆ ಇವರ್ಯಾರೂ ಶಾಶ್ವತವಾಗಿ ಆ ಪಟ್ಟವನ್ನು ಉಳಿಸಿಕೊಳ್ಳಲಿಲ್ಲ. ಜೀವನದುದ್ದಕ್ಕೂ ಸೋಲುವ ಭಯವನ್ನು ಅನುಭವಿಸಿದ್ದಾರೆ, ಪ್ರತಿಕ್ಷಣವನ್ನೂ ಆತಂಕದಿಂದ ಕಳೆದಿದ್ದಾರೆ, ಸಾವು ಹೊಂಚು ಹಾಕಿ ಕಾಯುತ್ತಿದೆಯೇನೋ ಎಂಬಂತೆ ಅಕ್ಕಪಕ್ಕದಲ್ಲಿ ಅಂಗರಕ್ಷಕರನ್ನು, ಒರೆಯೊಳಗೆ ಖಡ್ಗ ವನ್ನೂ ಜೊತೆಗೇ ಇರಿಸಿಕೊಂಡಿದ್ದಾರೆ.

  ವ್ಯಕ್ತಿಯು ತನ್ನ ಆಂತರ್ಯದಲ್ಲಿ ಹುಚ್ಚೆದ್ದು ಕುಣಿವ ಭಾವನೆಗಳಿಂದ ಸ್ವತಂತ್ರನಾಗದೆ ಹೋದರೆ ಆತ ಸಾರ್ವಭೌಮನಾಗಲಾರ. ತನ್ನನ್ನು ತಾನು ಗೆಲ್ಲದವ, ಜಗತ್ತನ್ನು ಗೆಲ್ಲುವುದು ಹೇಗೆ? ಬಾಹ್ಯಪ್ರಪಂಚದಲ್ಲಿ ತನ್ನ ಶೌರ್ಯದಿಂದ ವ್ಯಕ್ತಿಯು ಮನ್ನಣೆಯನ್ನು ಪಡೆಯಬಹುದು, ಚಕ್ರವರ್ತಿ ಎಂದು ಗುರುತಿಸಿಕೊಳ್ಳಬಹುದು ಆದರೆ ಆತನ ಅಂತರಂಗವು ಅದನ್ನು ಒಪ್ಪುತ್ತದೆಯೇ? ಮಾಡಿದ ದುರಿತಗಳು, ಆದ ಪ್ರಮಾದಗಳು, ಯುದ್ಧದ ಛೀತ್ಕಾರಗಳು ಅವನನ್ನು ಒಳಗೊಳಗೆ ದಹಿಸುವುದಿಲ್ಲವೇ? ತನ್ನೊಳಗೆ ನಡೆಯುವ ಕೋಲಾಹಲವನ್ನು ಹತ್ತಿಕ್ಕಲಾರದೆ ಆತ ಅತಂತ್ರನಂತೆ ಚಡಪಡಿಸುತ್ತಾನೆ.

  ಹಾಗಾಗಿ ವ್ಯಕ್ತಿಯು ಬಹಿರಂಗದಲ್ಲಿ ಪಡೆದ ಯಶಸ್ಸನ್ನು ಗಮನಿಸಿ ಆತನನ್ನು ಸಾರ್ವಭೌಮ ಎನ್ನುವುದಕ್ಕಿಲ್ಲ. ವ್ಯಕ್ತಿಯ ಅಂತರಂಗವೂ ಚಿಂತೆ, ಭಯಗಳಿಂದ ಸ್ವತಂತ್ರವಾಗಬೇಕು. ಕಾಡುವ ಭೋಗಾಪೇಕ್ಷೆಗಳಿಂದ ಮುಕ್ತವಾಗಬೇಕು. ಸಮಾಜದಲ್ಲಿ ಉನ್ನತ ಪದವಿಯನ್ನು , ಗೌರವಯುತ ಸ್ಥಾನವನ್ನೂ ಸಂಪಾದಿಸಬಹುದು. ಆದರೆ ಸೃಷ್ಟಿಯೊಳಗೆ ಶ್ರೇಷ್ಟನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವು ವಿಶೇಷವಾದ ಗುಣಗಳು ಇದ್ದರಷ್ಟೇ ವ್ಯಕ್ತಿಯು ಸಾಧಕನಾಗಬಲ್ಲ. ಇಂತಹ ಸಾಧಕನು ಸೃಷ್ಟಿಯ ಎಲ್ಲವನ್ನೂ ತನ್ನ ಆತ್ಮವೆಂದು ತಿಳಿಯುತ್ತಾನೆ. ಪ್ರಾಣಿ-ಪಕ್ಷಿಗಳಾದಿಯಾಗಿ ಭೂಮಿಯ ಮೇಲಿರುವ ಜೀವಗಳು ಪ್ರತ್ಯೇಕ-ಪ್ರತ್ಯೇಕವಾಗಿ ಕಂಡರೂ ಅದು ಏಕೈಕ ಮಹಾಚೈತನ್ಯದ ಅಂಶವೆನ್ನುವುದನ್ನು ಅರಿತು ಬಾಳುತ್ತಾನೆ.

  ತಾಯಿಯು ತನ್ನ ಮಕ್ಕಳನ್ನು ತನ್ನದೇ ಬದುಕಿನ ಭಾಗವೆಂಬಂತೆ ಜತನ ಮಾಡುತ್ತಾಳೆ. ಹಾಗೆಯೇ ಸಾಧಕನಾದವನು ಸರ್ವರ ಪ್ರಗತಿಗಾಗಿ ಶ್ರಮಿಸುತ್ತ, ಸತ್ಕಾರ್ಯಗಳನ್ನು ಮಾಡಲು ಉದ್ಯುಕ್ತನಾಗಿರುತ್ತಾನೆ. ಜೊತೆಗೆ ಆತ ಸದಾ ಪ್ರಸನ್ನಚಿತ್ತನಾಗಿರುತ್ತಾನೆ. ಕಾಮ, ಕ್ರೋಧ, ಅಹಂಕಾರಗಳಂತಹ ಭಾವವಿಕಾರಕ್ಕೆ ಒಳಗಾಗದೆ ಸಮಚಿತ್ತದಿಂದಿರುತ್ತಾನೆ. ಯಾವುದೇ ತೆರನಾದ ಬಾಹ್ಯ ಆಕರ್ಷಣೆಗಳು ಅವನಲ್ಲಿ ಚಿತ್ತಚಾಂಚಲ್ಯವನ್ನು ಉಂಟುಮಾಡಲಾರದು. ಇಂದ್ರಿಯಗಳು ಕ್ಷಣಿಕ ಸುಖದ ಭ್ರಮೆಗೆ ಒಳಗಾಗದು. ಹಾಗಾಗಿ ಜಗತ್ತಿನ ಸುಖ-ದುಃಖಗಳನ್ನು ಶಾಂತಚಿತ್ತದಿಂದ ಎದುರಿಸುತ್ತಾನೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂಒಂದಿನಿತೂ ವಿಚಲಿತನಾಗಲಾರ. ತನ್ನ ಪಾಲಿನ ಕರ್ತವ್ಯಗಳನ್ನು ನಿರ್ಮಮ ಭಾವದಿಂದ ನಿರ್ವಹಿಸುತ್ತಾನೆ.

  ಈ ರೀತಿ ಸರ್ವಾತ್ಮಕತೆ ಮತ್ತು ಪ್ರಸನ್ನತೆಯು ಸಹಜ ಸ್ವಭಾವವೇ ಆದಾಗ ವ್ಯಕ್ತಿ ತನ್ನನ್ನು ತಾನು ಗೆದ್ದ ಸಾರ್ವಭೌಮನಾಗುತ್ತಾನೆ. ಈತ ಸವೋದಯವನ್ನು, ಲೋಕಹಿತವನ್ನೂ ಬಯಸುತ್ತಾ ಸರ್ವರ ಒಳಿತಿಗಾಗಿ ಶ್ರಮಿಸುತ್ತಾನೆ. ಸಂಕಲ್ಪಿತ ಸದುದ್ದೇಶವನ್ನು ಈಡೇರಿಸುವ ಧೈರ್ಯ, ಬುದ್ಧಿವಂತಿಕೆ ಮತ್ತು ದಯಾಗುಣಗಳ ಮೂಲಕ ಲೋಕದ ಬೆಳಕಾಗಿ ಎಲ್ಲರಿಗೂ ಮಂಗಳವನ್ನುಂಟುಮಾಡುತ್ತಾನೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts