ಮೂಲನಿವಾಸಿಗಳ ಮೂಲದೇವರು ಕಾಡ್ಯಾನಾಗ

ಶ್ರೀಪತಿ ಹೆಗಡೆ ಹಕ್ಲಾಡಿ ಮುರೂರು
ಕಾಡ್ಯಾನಾಗ ಸನ್ನಿಧಿ ಮೂಲನಿವಾಸಿ ಕೊರಗ ಸಮುದಾಯಕ್ಕೆ ಮೀಸಲು. ಪೂಜೆ ಮಾಡುವ ಪೂಜಾರಿಯೂ ಸಮುದಾಯದವರೇ. ನೂರಾರು ವರ್ಷಗಳ ಹಿಂದೆ ಇದ್ದ ದೇವಸ್ಥಾನ ಪ್ರವೇಶ ನಿಷೇಧ ಧಿಕ್ಕರಿಸಿ ಕೊರಗ ಸಮುದಾಯ ಮೂರೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೈವ ಸನ್ನಿಧಿಯೇ ಶ್ರೀ ಕಾಡ್ಯಾನಾಗ ಮತ್ತು ಪರಿವಾರ ದೈವಸ್ಥಾನ.

ಮೂಲ ನಿವಾಸಿಗಳ ಪೂಜಾ ವಿಧಾನ, ಪರಿಕರ ವಿಭಿನ್ನ. ಮರದ ಬುಡವೇ ದೇವಸ್ಥಾನ! ಬೆಳಗ್ಗೆ ದೇವರ ಕಾಲ ಬುಡಕ್ಕೆ ಬಂದು ಅಲ್ಲೆ ಅಡುಗೆ ತಯಾರಿಸಿ, ನೈವೇದ್ಯ ಅರ್ಪಿಸಿ, ಊಟ ಮಾಡುವ ಮೂಲಕ ಪೂಜೆ ಕೊನೆಗೊಳ್ಳುತ್ತದೆ. ಪೂಜಾ ಕೈಂಕರ್ಯಕ್ಕೆ ಬಟ್ಟಲು, ಹರಿವಾಣ, ಚೊಂಬು, ಕೌಳಿಗೆ ಎಲ್ಲವೂ ಮಣ್ಣಿನದ್ದು ಎಂಬುದು ವಿಶೇಷ. ಮೂರೂರು ಕಾಡ್ಯಾನಾಗ ಹಾಗೂ ಪರಿವಾರ ದೈವಗಳ ಆವಾಸ ಸ್ಥಾನ ಎಂದು ನಂಬಿ ಪೂಜೆ ಮಾಡುವ ಸುಮಾರು 400 ವರ್ಷದ ಇತಿಹಾಸವಿರುವ ಬೃಹತ್ ಮರದ ಬುಡದಲ್ಲಿ ನಾಗನ ಹೆಡೆ, ಕಣ್ಣು ಮೂಡಿರುವುದು ಸೋಜಿಗ.

ಮೂಲನಿವಾಸಿಗಳ ಒಗ್ಗಟ್ಟು: ಕಾರಣಾಂತರಗಳಿಂದ ಕೊರಗರು ಮೂರೂರಿನಿಂದ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಗೆ ಹರಿದು ಹಂಚಿ ಹೋಗಿ ಮೂಲ ದೈವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದ್ದರು. ಮೂರೂರಿನಲ್ಲೇ ನೆಲೆಸಿದ್ದ ಕುಟುಂಬಗಳು ವರ್ಷಂಪ್ರತಿ ದೇವ ಸನ್ನಿಧಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ಮೂರೂರಿನಲ್ಲಿ ಮೇ 20ರಿಂದ 22ರ ತನಕ ನಡೆಯುವ ಪುನಃ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಎಲ್ಲರೂ ಮತ್ತೆ ಒಗ್ಗೂಡಲಿದ್ದಾರೆ.

ಹೀಗಿದೆ ಐತಿಹ್ಯ: ಸುಮಾರು 700 ವರ್ಷಗಳ ಹಿಂದೆ ಮೂರೂರು ಗುಂಡ್ವಾಣದಲ್ಲಿ ಕಾಡ್ಯಾನಾಗ ಹಾಗೂ ಪರಿವಾರ ದೈವಸ್ಥಾನ ಸ್ಥಾಪನೆಗೊಂಡಿದೆ ಎಂದು ಹೇಳಲಾಗುತ್ತದೆ. ಮೂರೂರು ಹಾಂತಾರ ಕುಟುಂಬ ಇದನ್ನು ನಂಬಿಕೊಂಡು ಬಂದಿದೆ. ಅಂದು ಗುಂಡ್ವಾಣದ ಸುತ್ತ ಕಬ್ಬು ಬೆಳೆಯಲಾಗುತ್ತಿತ್ತು. ಪ್ರತಿ ಬೆಳೆಯ ಸಮಯದಲ್ಲೂ ಈ ದೈವಸ್ಥಾನ ಸುತ್ತಮುತ್ತ ನೆಲೆಸಿದ್ದ ಸುಮಾರು 20 ಇತರೆ ಸಮುದಾಯದ ಕುಟುಂಬಗಳು ದೇವರಿಗೆ ಹಾಲು ಒಪ್ಪಿಸುತ್ತಿದ್ದದಲ್ಲದೇ ಪೂಜಾ ಸಾಮಗ್ರಿಗಳನ್ನೂ ಒದಗಿಸುತ್ತಿದ್ದರು. ವರ್ಷಕ್ಕೆ ಒಂದು ಭಾರಿ ನಡೆಯುವ ಹಬ್ಬದಲ್ಲಿ ಸ್ಥಳೀಯರು ಭಾಗವಹಿಸುತ್ತಿದ್ದರು. ಹಬ್ಬದ ಸಂದರ್ಭ ದೇವರಿಗೆ ಹರಕೆಯಾಗಿ ಕೋಳಿ ಕೊಯ್ದು ಬಳಿಕ ಅಲ್ಲೇ ಊಟ ಮಾಡಿ ಹಿಂದಿರುಗುತ್ತಿದ್ದರು. ಕೃಷಿ ಹಾಗೂ ಕಂಬಳಕ್ಕಾಗಿ ಕೋಣ ಸಾಕುತ್ತಿದ್ದ ಒಡೆಯರು ಗುಂಡ್ವಾಣದಿಂದ ಸ್ವಲ್ಪವೇ ದೂರದಲ್ಲಿರುವ ಮೂರೂರಿಗೆ ಬಂದಿದ್ದರಿಂದ ಕೋಣಗಳ ಚಾಕರಿಗಾಗಿ ಕೊರಗರನ್ನೂ ಮೂರೂರಿಗೆ ಕರೆದುಕೊಂಡು ಬಂದರು. ಹಾಗಾಗಿ ಗುಂಡ್ವಾಣದಲ್ಲಿ ಕಾಡ್ಯಾನಾಗ ಮೂಲಸ್ಥಾನವಿದ್ದರೆ, ಮೂರೂರಿನ ಕಾಡಿನ ಮಧ್ಯ ಹಾಗೂ ಹಿರಿಯ ಕುಟುಂಬದ ಜಾಗದಲ್ಲಿಯೂ ಕಾಡ್ಯಾನಾಗ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತ ಬಂದಿದ್ದರು. ಮೂರೂರಿನಲ್ಲಿ ನೆಲೆಸಿದ್ದ ಹಾಗೂ ವಲಸೆ ಹೋಗಿದ್ದ ಕುಟುಂಬಗಳು ಒಂದಿಲ್ಲೊಂದು ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರು. ಇದಕ್ಕಾಗಿ ಗುಂಡ್ವಾಣ ಕಾಡ್ಯಾನಾಗದ ಮೂಲ ಸ್ಥಾನದ ಸಮೀಪವಿರುವ ಶ್ರೀನಂದಿಕೇಶ್ವರ ದೇವರಲ್ಲಿ ಪ್ರಶ್ನೆಯನ್ನಿಟ್ಟ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗವಾಗಿ ಪುನಃ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ.

ಮೂಲ ನಿವಾಸಿಗಳ 70 ಕುಟುಂಬದ 300 ಜನರಿಗೆ ಕಾಡ್ಯಾನಾಗ ಮನೆ ದೇವರು. ಜೀವನ ನಿರ್ವಹಣೆ, ಬೇರೆಬೇರೆ ಕಾರಣದಿಂದ ಕಾಡ್ಯಾನಾಗ ನಂಬಿದ ಕುಟುಂಬ ವಲಸೆ ಹೋಗಿದ್ದರೂ ಅವರೆಲ್ಲರಿಗೂ ಮನೆ ದೇವರು ಕಾಡ್ಯಾ ಆಗಿದ್ದು, ಎಲ್ಲರೂ ಪುನಃ ಪ್ರತಿಷ್ಠಾಪನೆ ಸಮಯದಲ್ಲಿ ಹಾಜರಿರುತ್ತಾರೆ. ಕಾಡ್ಯಾನಾಗ ದೇವರ ಹಿನ್ನೆಲೆಯಲ್ಲಿ ಒಂದಾಗಿದ್ದ ಕುಟುಂಬಗಳು ಮತ್ತೆ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಬಾಂಧವ್ಯ ಬೆಸೆದುಕೊಳ್ಳಲಿದ್ದಾರೆ.
– ಸುರೇಶ್ ಎಳಜಿತ, ಕಾಡ್ಯಾನಾಗ ಪುನಃ ಪ್ರತಿಷ್ಠಾಪನೆ ಸೂತ್ರದಾರ

ಮೂಲನಿವಾಸಿಗಳ ಸಮಸ್ಯೆ ಸಂಕಷ್ಟಗಳ ಹಿನ್ನೆಲೆಯಲ್ಲಿ ಶ್ರೀ ನಂದಿಕೇಶ್ವರ ದೇವರಲ್ಲಿ ಪ್ರಶ್ನೆಯಿಟ್ಟಾಗ ನಮ್ಮ ಮೂಲ ದೇವರಾದ ಕಾಡ್ಯಾನಾಗ ಜೀರ್ಣೋದ್ಧಾರ ಮಾಡುವಂತೆ ಸೂಚನೆ ಮೂಡಿದ್ದರಿಂದ ಪುನಃಪ್ರತಿಷ್ಠಾಪನೆ ಮಾಡಲಾಗುತ್ತದೆ. ನಮ್ಮ ಸಮುದಾಯದ ಎಲ್ಲರೂ ಒಟ್ಟಾಗಿ ಈ ಕಾರ‌್ಯ ನಡೆಸುತ್ತಿದ್ದು, ಮೂಲಸ್ಥಾನ ಮುರೂರಲ್ಲಿ ಕಾಡ್ಯಾನಾಗ ಸ್ಥಾಪನೆಯ ಕಟ್ಟೆ, ಸಿಂಹಾಸನ ಎಲ್ಲವೂ ಸಿದ್ಧಗೊಳ್ಳುತ್ತಿದೆ.
– ನಾರಾಯಣ ಮುರೂರು, ಕಾಡ್ಯಾದೇವರ ನಂಬಿದ ಕುಟುಂಬ ಸದಸ್ಯ