ಬರದ ತಾಲೂಕಿನ ಮಕ್ಕಳ ನೆರವಿಗೆ ಹಾಸ್ಟೆಲ್

ಕಡೂರು: ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಅನುದಾನಿತ ವಿದ್ಯಾರ್ಥಿ ನಿಲಯ ಸೇರಿ 64 ವಿದ್ಯಾರ್ಥಿ ನಿಲಯಗಳಿದ್ದು, ಸುಮಾರು 5000 ವಿದ್ಯಾರ್ಥಿಗಳು ಉಚಿತ ಊಟ, ವಸತಿ ಜತೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿರುವ ಹಾಸ್ಟೆಲ್​ಗಳಲ್ಲಿ ಸಮಸ್ಯೆಗಳೂ ಇವೆ.

ಸಮಾಜ ಕಲ್ಯಾಣ ಇಲಾಖೆಯ 18, ಬಿಸಿಎಂ 33, ಮುರಾರ್ಜಿ ವಸತಿ ಶಾಲೆ 10 , ಅನುದಾನಿತ 3 ವಿದ್ಯಾರ್ಥಿ ನಿಲಯಗಳಲ್ಲಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆವಿಗೆ ವಿದ್ಯಾರ್ಥಿಗಳು ಹಾಸ್ಟೆಲ್​ಗಳ ಉಪಯೋಗ ಪಡೆಯುತ್ತಿದ್ದಾರೆ.

35 ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳನ್ನು ತಾಲೂಕಿಗೆ ಮಂಜೂರು ಮಾಡಿಸಿದ್ದ ಕೀರ್ತಿ ಮಾಜಿ ಶಾಸಕ ದಿ. ಕೆ.ಎಂ.ಕೃಷ್ಣಮೂರ್ತಿ ಅವರಿಗೆ ಸಲ್ಲುತ್ತದೆ. ತಾಲೂಕು ಬಯಲು ಸೀಮೆಯ ಪ್ರದೇಶವಾಗಿದ್ದು ಆಗಾಗ್ಗೆ ಬರಗಾಲಕ್ಕೆ ತುತ್ತಾಗುತ್ತಿದ್ದ ಹಿನ್ನೆಲೆಯಲ್ಲಿ ಪಂಚನಹಳ್ಳಿ, ದೇವನೂರು, ಸಖರಾಯಪಟ್ಟಣ, ಎಮ್ಮೆದೊಡ್ಡಿ, ಕುಂಕಾನಾಡು, ಹೋಚಿಹಳ್ಳಿ, ಬೀರೂರು, ಚೌಳಹಿರಿಯೂರು, ಗುಬ್ಬಿಹಳ್ಳಿ, ಬಾಣೂರು, ಚಿಕ್ಕಬಳ್ಳೆಕೆರೆ, ಯಗಟಿ, ಬಾಸೂರು, ಅಣ್ಣೆಗೆರೆ, ಎಸ್.ಬಿದರೆ ಸೇರಿ ತಾಲೂಕಿನ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆದು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.

ಎರಡೂ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿ ನಿಲಯಗಳು, ಮುರಾರ್ಜಿ ವಸತಿ ಶಾಲೆ, ಗಿರಿಜನ ಆಶ್ರಮ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಅಲೆಮಾರಿ ವಸತಿ ಶಾಲೆ, ಗೆದ್ಲೆಹಳ್ಳಿ ಅಲ್ಪಸಂಖ್ಯಾತ ಮಕ್ಕಳ ವಿದ್ಯಾರ್ಥಿ ನಿಲಯಗಳೂ ತಾಲೂಕಿನ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿವೆ. ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿ ಶೇ. 84 ಇದೆ . ಸಿಬ್ಬಂದಿ ಕೊರತೆ ಪ್ರಮುಖ: ಎಲ್ಲ ಸವಲತ್ತು ನೀಡುವ ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳೂ ಇವೆ. ನಿಲಯ ಪಾಲಕ ಹುದ್ದೆಗಳು ಖಾಲಿ ಇದ್ದು, ಆ ಸ್ಥಾನಗಳಲ್ಲಿ ಇಲಾಖೆಯ ಇತರರು ಆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಾಸ್ಟೆಲ್​ನಲ್ಲಿ ಸೌಲಭ್ಯ ಇಲ್ಲ ಎನ್ನುವ ಆರೋಪ ಮಾಡುವ ವಿದ್ಯಾರ್ಥಿಗಳು ಸಿನಿಮಾ ನಟ, ನಟಿಯರ ಕ್ರಿಕೆಟ್ ಆಟಗಾರರ ಪೋಸ್ಟರ್​ಗಳನ್ನು ಹಾಕಿಕೊಳ್ಳುವುದು, ಪಾನ್ ಪರಾಗ್ ಹಾಕುವುದನ್ನು ಬೆಳೆಸಿಕೊಂಡಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಆಗುತ್ತಿದೆ ಎನ್ನುತ್ತಾರೆ ಮೇಲ್ವಿಚಾರಕರು.

ಇನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ಮತ್ತು ಬಿಸಿಎಂ ಅಧಿಕಾರಿ ನಾಗವಲ್ಲಿ.