ಜೆಡಿಎಸ್ 23, ಕಾಂಗ್ರೆಸ್ 22, ಬಿಜೆಪಿ 18 ವಾರ್ಡ್​ಗಳಲ್ಲಿ ಸ್ಪರ್ಧೆ

ಕಡೂರು: ಕಡೂರು ಪುರಸಭೆಗೆ ಪ್ರಮುಖ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದ 23 ವಾರ್ಡ್​ಗಳಲ್ಲಿ ಜೆಡಿಎಸ್ 23, ಕಾಂಗ್ರೆಸ್ 22, ಬಿಜೆಪಿ 18 ವಾರ್ಡ್​ಗಳಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸಲಿವೆ.

ಈ ಬಾರಿ ಪುರಸಭೆ ಜೆಡಿಎಸ್ ತೆಕ್ಕೆಗೆ ತರಲು ಎಲ್ಲ 23 ವಾರ್ಡ್​ಗಳಲ್ಲಿ ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 23 ಅಭ್ಯರ್ಥಿಗಳಲ್ಲಿ ಎಂಟು ಜನ ಹಳಬರಿಗೆ ಟಿಕೆಟ್ ನೀಡಲಾಗಿದೆ. ಮೀಸಲಾತಿ ಬದಲಾಗಿರುವುದರಿಂದ ಕೆಲವು ಕಾರ್ಯಕರ್ತರ ಪತ್ನಿಯರಿಗೆ ಅವಕಾಶ ನೀಡಲಾಗಿದೆ. ಯುವಕರಿಗೆ ಆದ್ಯತೆ ನೀಡಲಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಪುರಸಭೆ ರಚನೆಯಾದಗಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಬಹುತೇಕ ಆಡಳಿತ ನಡೆಸಿದೆ. ಕಳೆದ ಬಾರಿ ಪಕ್ಷ ಹೆಚ್ಚು ಸ್ಥಾನಗಳಿಸಿದ್ದರೂ ಸದಸ್ಯರ ಬದಲಾವಣೆಯಿಂದ ಬಿಜೆಪಿ ಉಪಾಧ್ಯಕ್ಷರ ಸ್ಥಾನ ಪಡೆದು ಆಡಳಿತ ಹಂಚಿಕೆಯಾಗಿತ್ತು. ಈ ಬಾರಿ ಅಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 12ನೇ ವಾರ್ಡ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರಿಗೂ ಬಿ-ಫಾರಂ ನೀಡಿಲ್ಲ. ಈ ಬಾರಿ ಮೂವರು ಮಾಜಿ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಿದ್ದು ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ ಎಂದು ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ತಿಳಿಸಿದ್ದಾರೆ.

ಕಳೆದ ಬಾರಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಬಿಜೆಪಿ ಈ ಬಾರಿ 18 ವಾರ್ಡ್​ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಸದಸ್ಯೆ ಪುಷ್ಪಾಲತಾ ಸೋಮೇಶ್ ಹೊರತುಪಡಿಸಿ ಉಳಿದ 17 ವಾರ್ಡ್​ಗಳಿಗೆ ಹೊಸಬರನ್ನು ಪರಿಚಯಿಸಲಾಗಿದೆ. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಾಜೇಶ್ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಗೆಲ್ಲುವ ವಾರ್ಡ್​ಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಬಿಜೆಪಿ ತಾಲೂಕು ಕಾರ್ಯದರ್ಶಿ ಮಂಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *