ಕಲಾದಗಿ: ಸಮೀಪದ ತುಳಸಿಗೇರಿಯ ಶ್ರೀ ಮಾರುತೇಶ್ವರ ದೇವರ ಓಕುಳಿ ಮೇ 5 ರಂದು ಸಂಜೆ 5 ಗಂಟೆಗೆ ಜರುಗಲಿದ್ದು, ಇದರ ಪೂರ್ವದಲ್ಲಿ ಹರಿಸೇವೆ ಎಂಬ ವಿಶಿಷ್ಟ ಆಚರಣೆ ಭಾನುವಾರ ನಡೆಯಿತು.

ಈ ಆಚರಣೆಯ ಪ್ರಸಾದಕ್ಕೆಂದು ಊರಿನ ನೂರಾರು ಮಹಿಳೆಯರು, ಪುರುಷರು ಕೂಡಿ ಎಂಟ್ಹತ್ತು ಕ್ವಿಂಟಾಲ್ ಬೇಳೆ ಹಿಟ್ಟಿನ ಕಡುಬುಗಳನ್ನು ತಯಾರಿಸಿದ್ದರು. ಬೆಳಗ್ಗೆ ಆರಂಭವಾದ ಕಡುಬು ತಯಾರಿಯ ಕೆಲಸ ಸಂಜೆ 4 ಗಂಟೆಯವರೆಗೂ ಅವ್ಯಾಹತವಾಗಿ ನಡೆಯುತ್ತಲೇ ಇತ್ತು. ಇದಕ್ಕೆ ಬೇಕಾದ ಹೂರಣವನ್ನು ಶನಿವಾರ ರಾತ್ರಿಯೇ ಸಿದ್ಧಪಡಿಸಲಾಗಿತ್ತು.
ಸಂಜೆ ಮಾರುತೇಶ್ವರ, ಬೆಣ್ಣಪ್ಪದೇವರಿಗೆ ದೊಡ್ಡದಾದ ಐದು ಕಡುಬುಗಳ ನೈವೇದ್ಯ ಮಾಡಲಾಯಿತು. ಬಾಬುದಾರರಾದ ಐದು ಮನೆಗಳ ಗಂಡು ಮುತ್ತೈದೆಯರಿಗೆ ಗೌರವಾಚರಣೆಗಳು ನಡೆದು, ಆನಂತರ ಸಾವಿರಾರು ಮಂದಿ ಕಡುಬಿನ ಪ್ರಸಾದ ಸವಿದರು.
ಇಂದು ಓಕುಳಿ: ಸೋಮವಾರ ಸಂಜೆ ಮಾರುತೇಶ್ವರ ದೇವರ ಓಕುಳಿ ಸಂಭ್ರಮೊಲ್ಲಾಸದಿಂದ ನಡೆಯಲಿದ್ದು, ದೇವಾಲಯದ ಆವರಣದಲ್ಲಿರುವ ಪುಟ್ಟದಾದ ಓಕುಳಿ ಹೊಂಡದಲ್ಲಿ ಸಾವಿರಾರು ಭಕ್ತರು ಜಿಗಿದು ಮೇಲೇಳುವ ಚೇತೋಹಾರಿ ದೃಶ್ಯ ಭಕ್ತರ ಗಮನ ಸೆಳೆಯಲಿದೆ.