ಕದ್ರಿ ಪಾರ್ಕ್ ನವೀಕರಣ

 <10 ಕೋಟಿ ರೂ.ವೆಚ್ಚದ ಯೋಜನೆ * ಶಾಸಕ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಹಂತದ ಸಭೆ>

ಭರತ್ ಶೆಟ್ಟಿಗಾರ್ ಮಂಗಳೂರು

ನಗರದ ಪ್ರಮುಖ ಲ್ಯಾಂಡ್ ಮಾರ್ಕ್‌ಗಳಲ್ಲಿ ಒಂದಾಗಿರುವ ಕದ್ರಿ ಪಾರ್ಕ್‌ನ್ನು ನವೀಕರಿಸುವ ಚಿಂತನೆ ಜಿಲ್ಲಾಡಳಿತದ ಮುಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ಕದ್ರಿ ಪಾರ್ಕ್ ಸುಮಾರು 20 ಎಕರೆ ವಿಸ್ತೀರ್ಣ ಹೊಂದಿದ್ದು, ನಗರದೊಳಗಿನ ಅತಿ ದೊಡ್ಡ ಪಾರ್ಕ್ ಆಗಿದೆ. ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ನೇತೃತ್ವದ ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿಯಿಂದ ಈ ಕುರಿತು ಮೊದಲ ಹಂತದ ಸಭೆ ನಡೆದಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಯಾವ ರೀತಿ ಅಭಿವೃದ್ಧಿ: ಸಂಪೂರ್ಣ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಯೋಜನೆಯಲ್ಲಿ ಸೇರಿದೆ. ಹೊಸದಾಗಿ ನಿರ್ಮಿಸಲಾಗಿರುವ ಜಿಂಕೆ ವನವೂ ಕದ್ರಿ ಪಾರ್ಕ್ ಅಡಿ ಬರುತ್ತದೆ. ಜಿಂಕೆ ವನ ಇತ್ತೀಚೆಗಷ್ಟೇ ನಿರ್ಮಾಣ ಮಾಡಿರುವುದರಿಂದ ಅದನ್ನು ಬಿಟ್ಟು ನವೀಕರಿಸಲಾಗುತ್ತದೆ. ಈ ಎರಡು ಪಾರ್ಕ್‌ಗಳ ಮಧ್ಯೆ ಸರ್ಕೀಟ್ ಹೌಸ್‌ನಿಂದ ಪಾದುವ ಹೈಸ್ಕೂಲ್‌ವರೆಗೆ ಹಾದು ಹೋಗುವ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ತಡೆದು ಫುಡ್‌ಸ್ಟಾಲ್ ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಕುರಿತೂ ಸಭೆಯಲ್ಲಿ ಚರ್ಚೆಯಾಗಿದೆ. ಪಾರ್ಕ್ ನವೀಕರಣ ಕಾಮಗಾರಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ ಹೊಂದಿಸುವ ಕುರಿತು ಜಿಲ್ಲಾಧಿಕಾರಿ ಪರಿಶೀಲಿಸುತ್ತಿದ್ದಾರೆ. ಸರ್ಕಾರಿ-ಖಾಸಗಿ ಸಹಭಾಗಿತ್ವದ ಕುರಿತೂ ಸಭೆಯಲ್ಲಿ ಚರ್ಚೆಯಾಗಿದೆ. ಯೋಜನೆ ಆರಂಭಿಕ ಹಂತದಲ್ಲಿದ್ದು, ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.

ಸ್ಕೇಟಿಂಗ್ ರಿಂಕ್ ಅಭಿವೃದ್ಧಿ: ಕದ್ರಿ ಪಾರ್ಕ್ ಹೊಂದಿಕೊಂಡಂತೆ ಹೆದ್ದಾರಿ ಇನ್ನೊಂದು ಬದಿಯಲ್ಲಿರುವ ಸ್ಕೇಟಿಂಗ್ ರಿಂಕ್ ಅಭಿವೃದ್ಧಿಯೂ ಇದರಲ್ಲಿ ಸೇರಿದೆ. ಪಾರ್ಕ್‌ನಿಂದ ಹೆದ್ದಾರಿ ಮೂಲಕ ಅಂಡರ್‌ಪಾಸ್ ನಿರ್ಮಿಸುವ ಕುರಿತೂ ಚಿಂತನೆ ನಡೆದಿದೆ.

ನೀರು ಸಂಗ್ರಹಣಾ ವ್ಯವಸ್ಥೆ: ಕದ್ರಿ ಪಾರ್ಕ್‌ನಲ್ಲಿ ಗಿಡಗಳಿಗೆ ನೀರು ಸಂಗ್ರಹಣಾ ವ್ಯವಸ್ಥೆ ಮಾಡುವುದು ಯೋಜನೆಯಲ್ಲಿ ಸೇರಿದೆ. ಪ್ರಸ್ತುತ ಪಾರ್ಕ್‌ನಲ್ಲಿ ನೀರು ಸಂಗ್ರಣೆಗಾಗಿ ಗಂಗನಪಳ್ಳವೆಂಬ ಪ್ರದೇಶವಿದ್ದು, ಇದು ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಇದನ್ನು ಸರಿಪಡಿಸಿ ಅಲ್ಲಿ ನೀರು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ.

ಕದ್ರಿ ಪಾರ್ಕ್ ನವೀಕರಣಕ್ಕೆ ಚಿಂತನೆ ನಡೆದಿದೆ. ಯೋಜನೆ ಮೊದಲ ಹಂತದಲ್ಲಿದ್ದು, ಯೋಜನೆ ತಯಾರಿಸಲಾಗುತ್ತಿದೆ. ಯೋಜನೆಗೆ ಯಾವ ರೀತಿ ಹಣ ಹೊಂದಿಸಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿ, ಶಾಸಕರು ತೀರ್ಮಾನ ಕೈಗೊಳ್ಳಲಿದ್ದಾರೆ.
ಎಚ್.ಆರ್.ನಾಯ್ಕ ತೋಟಗಾರಿಕಾ ಇಲಾಖೆ ಉಪನಿರ್ದೇಶಕ