ಕದ್ರಿ ಪಾರ್ಕ್​ನಲ್ಲಿ ಸೊರಗುತ್ತಿದೆ ಆಟದ ಸಲಕರಣೆ

ಹರೀಶ್ ಮೋಟುಕಾನ ಮಂಗಳೂರು

ನಗರದ ಕದ್ರಿ ಪಾರ್ಕ್ ಹೊರಾಂಗಣದಲ್ಲಿ 1.16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವ್ಯಾಯಾಮ ಸಲಕರಣೆ, ವಾಕಿಂಗ್ ಟ್ರಾೃಕ್, ವಿಶೇಷ ಮಕ್ಕಳ ಆಟದ ಸಲಕರಣೆ ಸೂಕ್ತ ನಿರ್ವಾಹಕರಿಲ್ಲದೆ ಸೊರಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಸೌಲಭ್ಯ ಮಾರ್ಚ್ 1ರಂದು ಉದ್ಘಾಟಿಸಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ವ್ಯಾಯಾಮ ಸಲಕರಣೆಗಳಿದ್ದರೂ ಅದರ ಮೇಲ್ವಿಚಾರಣೆಗೆ ಯಾರನ್ನೂ ನೇಮಕ ಮಾಡದೆ ಇರುವುದರಿಂದ ಕಿಡಿಗೇಡಿಗಳು ಅದನ್ನು ಮುರಿದು ಹಾಕುತ್ತಿದ್ದಾರೆ.

ಕುಳಿತು ವ್ಯಾಯಾಮ ಮಾಡಬಹುದಾದ ಸಲಕರಣೆಗಳ ಮೇಲೆ ಕಾಲಿಟ್ಟು ನಿಂತು ಯುವಕ ಯುವತಿಯರು ಕುಣಿಯುವುದು ಮಾಮೂಲಿ. ಕೇವಲ ಒಂದು ತಿಂಗಳಲ್ಲೇ ಎರಡು ವ್ಯಾಯಾಮ ಯಂತ್ರಗಳ ಪೆಡಲ್ ತುಂಡು ಮಾಡಿ ಹಾಕಿದ್ದಾರೆ. ಅದನ್ನು ಜೋಡಿಸಿದ ಬಳಿಕ ಮತ್ತೆ ಒಂದು ಯಂತ್ರದ ಪೆಡಲ್ ತುಂಡಾಗಿದೆ.

ವ್ಯಾಯಾಮ ಘಟಕ ಅಳವಡಿಸಲು ಪಾರ್ಕ್‌ನಲ್ಲಿ ಶೆಲ್ಟರ್ ಅಳವಡಿಸಿ ನೆಲಕ್ಕೆ ಬೆಡ್ ಹಾಕಿ, ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಪರಿಕರ ಅಳವಡಿಸಲಾಗಿದೆ. ಜಿಮ್ ಸಲಕರಣೆಗಳ ಬಳಕೆ ಬಗ್ಗೆ ಸಲಹೆ, ಚಿತ್ರ ಮಾಹಿತಿ ಹಾಕಲಾಗಿದೆ. ಸಲಹೆ ನೀಡಲು ಗೈಡ್ ವ್ಯವಸ್ಥೆ ಇಲ್ಲ. ಜಿಮ್ ಪರಿಕರಗಳ ಬಳಕೆ ಉಚಿತವಾಗಿದೆ. ಗೈಡ್ ಇಲ್ಲದೆ ಇರುವುದರಿಂದ ಅದರ ಸದ್ಬಳಕೆಯಾಗುವ ಬದಲು ದುರ್ಬಳಕೆಯಾಗುತ್ತಿದೆ ಎಂದು ನಿತ್ಯ ವಿಹಾರಕ್ಕೆ ಬರುವ ಬಾಲಕೃಷ್ಣ ತಿಳಿಸಿದ್ದಾರೆ.

ಅಮೃತ್ ಯೋಜನೆಯಡಿ ಓಪನ್ ಜಿಮ್ ವ್ಯವಸ್ಥೆ
ಕದ್ರಿ ಪಾರ್ಕ್‌ಗೆ ಬರುವವರ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ 23 ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ. ಬೆಳಗ್ಗೆ ಮತ್ತು ಸಾಯಂಕಾಲ ವಿಹಾರಕ್ಕೆ ಬರುವ ಸಾಕಷ್ಟು ಮಂದಿ ಜಿಮ್‌ನ ಪ್ರಯೋಜನ ಪಡೆಯುತ್ತಿದ್ದಾರೆ. ಪಾರ್ಕ್‌ನಲ್ಲಿ ವ್ಯಾಯಾಮ ಮಾಡುವವರಿಗೆ ಯಾವುದೇ ಸವಲತ್ತು ಇಲ್ಲ ಎಂಬ ಕೂಗಿಗೆ ಸ್ಪಂದಿಸಿ, ತೋಟಗಾರಿಕೆ ಇಲಾಖೆ ಸುಪರ್ದಿಯಲ್ಲಿರುವ ಪಾರ್ಕ್‌ನೊಳಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಅಮೃತ್ ಯೋಜನೆಯಡಿ ಓಪನ್ ಜಿಮ್ ವ್ಯವಸ್ಥೆ ಅಳವಡಿಸಲಾಗಿದೆ.

ಈಗ ರಜಾ ಅವಧಿಯಾದ ಕಾರಣ, ಕದ್ರಿ ಪಾರ್ಕ್‌ಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಇಲ್ಲಿನ ವ್ಯಾಯಾಮ ಸಲಕರಣೆಗಳನ್ನು ಬೇಕಾಬಿಟ್ಟಿ ತಿರುಗಿಸುವ, ಮೇಲೆ ಕುಳಿತು ಮುರಿದು ಹಾಕುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಥವಾ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆ ಮಾಡಬೇಕು.
ಸುರೇಶ್, ಸ್ಥಳೀಯ ನಿವಾಸಿ

ಕದ್ರಿ ಉದ್ಯಾನವನದ ವ್ಯಾಯಾಮ ಸಲಕರಣೆಗಳನ್ನು ಒಂದು ಬಾರಿ ಸರಿಪಡಿಸಲಾಗಿದೆ. ಮತ್ತೆ ಹಾಳಾಗಿರುವುದು ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲೇ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ವ್ಯಾಯಾಮ ಸಲಕರಣೆ ಬಳಕೆ ಸಂದರ್ಭ ಸಾರ್ವಜನಿಕರು ಜಾಗ್ರತೆ ವಹಿಸಬೇಕು.
ಗುರುರಾಜ್ ಮರಳಹಳ್ಳಿ,  ಮನಪಾ ಕಾರ್ಯಪಾಲಕ ಅಭಿಯಂತರ

Leave a Reply

Your email address will not be published. Required fields are marked *