ಹಟ್ಟಿಚಿನ್ನದಗಣಿ: ಕಡ್ಡೋಣಿ ಗ್ರಾಮದಲ್ಲಿ 30 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದು, ನಿರುಪಯುಕ್ತವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಯಾವುದೇ ಅಧಿಕಾರಿಗೂ ಮಾಹಿತಿ ಇಲ್ಲ.
ರೋಡಲಬಂಡಾ(ತ) ಗ್ರಾಪಂ ವ್ಯಾಪ್ತಿಯ ಕಡ್ಡೋಣಿಯಲ್ಲಿ 350ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ 2009ರಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಟ್ಯಾಂಕ್‌ಗೆ ಗೌಡೂರು ಕಾಲುವೆಯಿಂದ 20 ಲಕ್ಷ ರೂ ವೆಚ್ಚದಲ್ಲಿ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ.
40 ಲಕ್ಷ ರೂಪಾಯಿ ವೆಚ್ಚವಾದರೂ ಟ್ಯಾಂಕ್ ಬಳಕೆಯಾಗಿಲ್ಲ. ಇದರಿಂದಾಗಿ ಮನೆಗೆ ನೀರು ತಲುಪಲಿದೆ ಎಂದು ಕಳೆದ 15 ವರ್ಷಗಳಿಂದ ಕಾದು ಕುಳಿತಿರುವ ಜನರು ಬೇಸತ್ತಿದ್ದಾರೆ. ಈ ಕುರಿತ ಕಾಮಗಾರಿಗಾಗಿ ಖರೀದಿಸಿದ್ದ ಬೋರ್‌ವೆಲ್ ಸಾಮಗ್ರಿ, ವಿದ್ಯುತ್ ಪರಿವರ್ತಕ, ಪೈಪ್‌ಗಳು ಸೇರಿದಂತೆ ಇತರ ಸಾಮಾಗ್ರಿಗಳು ಅನ್ಯರ ಪಾಲಾಗಿವೆ ಎಂದು ಹೇಳಲಾಗುತ್ತಿದೆ. ಕಾಮಗಾರಿ ಅಪೂರ್ಣವಾಗಿದ್ದು, ಈ ಕಾಮಗಾರಿ ಕುರಿತ ಮಾಹಿತಿ ಸಂಬಂಧಿಸಿದ ಗ್ರಾಪಂ ಹಾಗೂ ತಾಪಂ ಬಳಿಯೂ ಇಲ್ಲದಿರುವುದು ಸೋಜಿಗವಾಗಿದೆ.