ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ವ್ಯಕ್ತಿ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಪುತ್ತೂರು
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಹಾಗೂ ಸಂಚು ಹೂಡಿದ ಆರೋಪಿಗಳ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿದ್ದು, ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಪುತ್ತೂರು ಮೂಲದ ಯುವಕನ ಹೆಸರು ಸೇರಿದೆ.
ತಲೆಮರೆಸಿಕೊಂಡಿರುವ 11 ಮಂದಿ ಮೋಸ್ಟ್ ವಾಂಟೆಡ್ ಉಗ್ರರು ಹಾಗೂ ನಕ್ಸಲರ ಪಟ್ಟಿಯನ್ನು ಎಎನ್‌ಐ ಬಿಡುಗಡೆ ಮಾಡಿದ್ದು, ಪುತ್ತೂರು ತಾಲೂಕಿನ ನೂಜಿ ಬಾಳ್ತಿಲದ ಜಯಪ್ರಕಾಶ್ ಅಲಿಯಾಸ್ ಅಣ್ಣಾನ ಎಂಬಾತನ ಹೆಸರಿದೆ.
ಗೋವಾದ ಮಡಂಗಾವ್‌ನಲ್ಲಿ 2009ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಎನ್‌ಐಎ ವೆಬ್‌ಸೈಟಿನಲ್ಲಿರುವ ಮಾಹಿತಿಯಂತೆ ಈತ ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದಾನೆ. ಅಜ್ಮೀರ್ ಶರೀಫ್ ದರ್ಗಾ ಸ್ಫೋಟ, ಸಂಜೋತಾ ಎಕ್ಸೃ್ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟ, ಗೋವಾ ಮತ್ತು ಹೈದ್ರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ 11 ಮಂದಿ ಶಂಕಿತ ಉಗ್ರರ ಪಟ್ಟಿಯನ್ನು ಎನ್‌ಐಎ ಬಿಡುಗಡೆ ಮಾಡಿದೆ.
ನೂಜಿ ಬಾಳ್ತಿಲ ಗ್ರಾಮದ ಬಾಳ್ತಿಲದಲ್ಲಿ ಮನೆಸಂಖ್ಯೆ 2-116 ಎಂದು ಈತನ ವಿಳಾಸವನ್ನೂ ನೀಡಲಾಗಿದೆ. ಸಂಘಟನೆಯ ಇತರ ಇಬ್ಬರು ಸದಸ್ಯರಾದ ಪ್ರವೀಣ್ ಲಿಮ್ಮೆರ್ ಹಾಗೂ ರುದ್ರ ಪಾಟೀಲ್ ಎಂಬುವರ ಜತೆ ಸೇರಿ ಗೋವಾ ಸ್ಫೋಟಕ್ಕೆ ಸಂಚು ರೂಪಿಸಿದ್ದಾನೆ ಎನ್ನುವುದು ಈತನ ಮೇಲಿನ ಆರೋಪ.
ಈ ಆರೋಪಿಗಳು ತಪ್ಪಿಸಿಕೊಂಡು ವಿದೇಶಕ್ಕೆ ಹೋಗದಂತೆ ತಡೆಯಲು ಈ ಪಟ್ಟಿ ಸಹಕಾರಿಯಾಗಲಿದೆ. ಇಮಿಗ್ರೇಶನ್ ಅಧಿಕಾರಿಗಳು ಕೂಡಾ ಇವರಿಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದು, ದೇಶದಿಂದ ಹೊರಹೋಗದಂತೆ ತಡೆಯುವುದು ಇದರ ಉದ್ದೇಶ.

ಎಲೆಕ್ಟ್ರಿಷಿಯನ್ ಆಗಿದ್ದ: ಮೂಲತಃ ಕಡಬ ನೂಜಿಬಾಳ್ತಿಲ ಕಟ್ಟತ್ತಡ್ಕದವನಾದ ಜಯಪ್ರಕಾಶ್ ಇಲೆಕ್ಟ್ರೀಷಿಯನ್ ಆಗಿದ್ದ. 2008ರಲ್ಲಿ ಸನಾತನ ಸಂಸ್ಥೆಯ ಪ್ರಚಾರಕನಾಗಿದ್ದ. ಬೆಳ್ತಂಗಡಿ ತಾಲೂಕು ಕಕ್ಕಿಂಜೆ ತೋಟತ್ತಾಡಿಯ ಯುವತಿಯೊಬ್ಬರನ್ನು ಮದುವೆಯಾಗಿದ್ದ ಈತನಿಗೆ ಒಂದು ಮಗು ಕೂಡ ಇದೆ ಎನ್ನಲಾಗಿದೆ. 2009ರಲ್ಲಿ ಈತ ಊರು ಬಿಟ್ಟು, ನಂತರ ಮನೆಯವರ ಸಂಪರ್ಕಕ್ಕೂ ಸಿಕ್ಕಿಲ್ಲ. ಈತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಜಯಪ್ರಕಾಶ್ ಬಳಿಕ ಒಮ್ಮೆ ಮಾತ್ರ ಪುತ್ತೂರಿಗೆ ಬಂದಿದ್ದು, ಪೊಲೀಸರು ಬಲೆ ಬೀಸಿದರೂ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

ತನಿಖಾ ತಂಡ ಬಂದಿತ್ತು: 013ರಲ್ಲಿ ಹೈದರಾಬಾದ್‌ನಿಂದ ಕಡಬಕ್ಕೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಜಯಪ್ರಕಾಶ್ ಭಾವಚಿತ್ರದ ಪೋಸ್ಟರ್‌ಗಳನ್ನು ಸರ್ಕಾರಿ ಕಚೇರಿಗಳ ಗೋಡೆಗೆ ಹಚ್ಚಿದ್ದರು. ಆರೋಪಿಯ ಸುಳಿವು ನೀಡಿದಲ್ಲಿ 25 ಸಾವಿರ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು.