ಬೆಂಗಳೂರು: ಕರೊನಾ ಲಾಕ್ಡೌನ್ ಸಡಿಲವಾದ ಬೆನ್ನಲ್ಲೇ ಅಲ್ಲೊಂದು ಇಲ್ಲೊಂದು ಸಿನಿಮಾ ತಂಡಗಳು ಶೂಟಿಂಗ್ ಶುರು ಮಾಡಿಕೊಳ್ಳಲು ಪ್ಲಾನ್ ಮಾಡಿಕೊಳ್ಳುತ್ತಿವೆ. ಈಗಾಗಲೇ ಕಿಚ್ಚ ಸುದೀಪ್ ನಾಯಕತ್ವದ ‘ಫ್ಯಾಂಟಮ್ ಸಿನಿಮಾ ಸೇರಿ ಇನ್ನೂ ಕೆಲವು ಸಿನಿಮಾಗಳು ಚಿತ್ರೀಕರಣಕ್ಕೆ ಚಾಲನೆ ನೀಡಿವೆ.
ಇತ್ತ ಆಗಸ್ಟ್ 15ರ ಬಳಿಕ ಯಶ್ ‘ಕೆಜಿಎಫ್’ ಕೊನೇ ಹಂತದ ಶೂಟಿಂಗ್ಗೆ ಚಾಲನೆ ನೀಡಲಿದೆ. ಇದೀಗ ಉಪೇಂದ್ರ ಸಹ ಬಹುದಿನಗಳ ಬಳಿಕ ಕ್ಯಾಮರಾ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆರ್.ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ನ ‘ಕಬ್ಜ’ ಸಹ ಶೂಟಿಂಗ್ಗೆ ತಯಾರಿ ನಡೆಸುತ್ತಿದೆ.
ಈಗಾಗಲೇ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಬೃಹತ್ ಸೆಟ್ ನಿರ್ಮಾಣ ಕೆಲಸ ಸಹ ಶುರುವಾಗಿದೆ. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿರುವ ನಿರ್ದೇಶಕ ಚಂದ್ರು, ‘ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಸೆಪ್ಟಂಬರ್ 1ರಿಂದ ಮರು ಚಾಲನೆ ನೀಡಲಿದ್ದೇವೆ. ಬಹುತೇಕ ಸಿನಿಮಾ ಸೆಟ್ನಲ್ಲಿ ನಡೆಯಲಿರುವುದರಿಂದ, ಸೆಟ್ ಕೆಲಸಗಳು ನಡೆಯುತ್ತಿವೆ.
ಶೂಟಿಂಗ್ ಜತೆಗೆ ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತ ‘ಕಬ್ಜ’ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಚಿತ್ರದ ಶೇ. 50 ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬಾಕಿ ಚಿತ್ರೀಕರಣವನ್ನು ಮಿನರ್ವ ಮಿಲ್ನಲ್ಲಿಯೇ ಮಾಡಿಕೊಳ್ಳಲಿದ್ದಾರಂತೆ ನಿರ್ದೇಶಕರು. ಇನ್ನುಳಿದಂತೆ ಲಾಕ್ಡೌನ್ನಿಂದಾಗಿ ಚಿತ್ರದಲ್ಲಿ ಒಂದಷ್ಟು ಬದಲಾವಣೆಗಳನ್ನೂ ಚಂದ್ರು ಮಾಡಿಕೊಂಡಿದ್ದು, ಆ ಬದಲಾವಣೆ ಅವರಿಗೆ ಖುಷಿ ನೀಡಿದೆಯಂತೆ.
ಅನುದಾನಿತ ಶಾಲೆಯಲ್ಲಿ ಓದಿದರೂ, ಐಎಎಸ್ ಗುರಿ ಮುಟ್ಟಿದ ಕೌಶಿಕ್; ಉನ್ನತ ಹುದ್ದೆಯಲ್ಲಿದ್ದು, ದೇಶ ಸೇವೆ ಹಂಬಲ