ಕಬಡ್ಡಿ ಕ್ರೀಡಾಂಗಣ ಔಟ್!

ಪಿ.ಬಿ.ಹರೀಶ್ ರೈ ಮಂಗಳೂರು
ಶಿಲಾನ್ಯಾಸ ನಡೆದು ಕೇವಲ ಒಂದು ತಿಂಗಳಾಗಿದೆ. ಈಗ ಶಿಲಾನ್ಯಾಸ ನೆರವೇರಿಸಿದ ಸಚಿವರೇ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಅಲ್ಲಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಿರ್ಮಾಣವಾಗಬೇಕಿದ್ದ ಕಬಡ್ಡಿ ಕ್ರೀಡಾಂಗಣ ಬಹುತೇಕ ರದ್ದುಗೊಂಡಿದೆ..!

ಮಂಗಳೂರು ಮಹಾನಗರ ಪಾಲಿಕೆ ಕರಾವಳಿ ಉತ್ಸವ ಮೈದಾನದಲ್ಲಿ ಸುಸಜ್ಜಿತ ಒಳಾಂಗಣ ಕಬಡ್ಡಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿತ್ತು. ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಈ ಕ್ರೀಡಾಂಗಣದಲ್ಲಿ 3 ಕೋರ್ಟ್, ಒಂದು ಸಾವಿರಕ್ಕೂ ಅಧಿಕ ಆಸನದ ಗ್ಯಾಲರಿ, ಶೌಚಗೃಹ, ವಿಶ್ರಾಂತಿ ಕೊಠಡಿ ಸೌಲಭ್ಯ ಹೊಂದಲಿದೆ ಎಂದು ತಿಳಿಸಲಾಗಿತ್ತು. ಮನಪಾ ವತಿಯಿಂದ 80 ಲಕ್ಷ ರೂ. ಮತ್ತು ಇತರ ಮೂಲಗಳಿಂದ 40 ಲಕ್ಷ ರೂ. ಭರಿಸಲು ನಿರ್ಧರಿಸಲಾಗಿತ್ತು. ಜ.5ರಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದರು.

ನಾಗರಿಕರ ವಿರೋಧ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸ್ವಾಮ್ಯದಲ್ಲಿರುವ ಈ ಮೈದಾನ ಕ್ರೀಡಾಪಟುಗಳ ಅಭ್ಯಾಸಕ್ಕೆಂದು ಮೀಸಲಿರಿಸಿದ ಮೈದಾನ. ಈಗ ಮೈದಾನದ ಅರ್ಧಭಾಗದಲ್ಲಿ ವರ್ಷವಿಡೀ ಕರಾವಳಿ ಉತ್ಸವ ಮತ್ತು ಇತರ ವ್ಯಾಪಾರ ಮೇಳ ನಡೆಯುತ್ತದೆ. ಉಳಿದ ಅರ್ಧ ಭಾಗವನ್ನು ಸ್ಥಳೀಯರು ಕ್ರಿಕೆಟ್, ಫುಟ್‌ಬಾಲ್, ಹಾಕಿ ಪಂದ್ಯಾಟಗಳಿಗೆ ಹಾಗೂ ಹಿರಿಯರು ವಾಕಿಂಗ್‌ಗೆ ಬಳಸುತ್ತಿದ್ದಾರೆ. ಇಲ್ಲಿ ಕಬಡ್ಡಿ ಕ್ರೀಡಾಂಗಣ ನಿರ್ಮಿಸಿದರೆ ಅಭ್ಯಾಸಕ್ಕೆ ಮೈದಾನ ಇಲ್ಲದಂತಾಗುತ್ತದೆ ಎಂದು ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ, ಸಚಿವ ಖಾದರ್ ಮತ್ತು ಕ್ರೀಡಾ ಸಚಿವರಿಗೂ ಈ ಬಗ್ಗೆ ಮನವಿ ಮಾಡಿದ್ದರು.

ಕಾಮಗಾರಿ ಆರಂಭ: ಉರ್ವಮಾರ್ಕೆಟ್ ಮೈದಾನದಲ್ಲಿ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ 2018ರ ಮಾ.22ರಂದು ಆಗಿನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ್ದರು. 6.5 ಕೋಟಿ ರೂ. ವೆಚ್ಚದ ವಿಶ್ವ ದರ್ಜೆಯ ಕ್ರೀಡಾಂಗಣ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದರು. ಆದರೆ ಇದುವರೆಗೆ ಅಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲ. ಅದರೆ ಕರಾವಳಿ ಉತ್ಸವ ಮೈದಾನದಲ್ಲಿ ಶಿಲಾನ್ಯಾಸ ನಡೆದು ಒಂದೆರಡು ದಿನಗಳಲ್ಲೇ ಕಾಮಗಾರಿ ಆರಂಭವಾಗಿತ್ತು. ಕಾಮಗಾರಿ ಹೊರಗೆ ಕಾಣಿಸದಂತೆ ಪರದೆ ಮಾದರಿಯ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿತ್ತು.
ಮನವಿಗೆ ಸ್ಪಂದನೆ: ಈಗ ನಾಗರಿಕರ ಮನವಿಗೆ ಸ್ಪಂದಿಸಿದ ಸಚಿವರು ಕಾಮಗಾರಿಯನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ. ತಾತ್ಕಾಲಿಕ ತಡೆಗೋಡೆಯನ್ನು ಕೂಡ ತೆರವುಗೊಳಿಸಲಾಗಿದೆ. ಕಾಮಗಾರಿ ಸ್ಥಗಿತಗೊಂಡಿದ್ದು, ಸದ್ಯ ಪಂದ್ಯಾಟ ನಡೆಸಲು ಅನುಕೂಲವಾಗಿದೆ.

ಸುಸಜ್ಜಿತ ಒಳಾಂಗಣ ಕಬಡ್ಡಿ ಕ್ರೀಡಾಂಗಣದ ಅಗತ್ಯವಿದೆ. ಕರಾವಳಿ ಉತ್ಸವ ಮೈದಾನದಲ್ಲಿ ನಿರ್ಮಿಸಲು ನಗರ ಪಾಲಿಕೆ ಉದ್ದೇಶಿಸಿತ್ತು. ಆದರೆ ನಾಗರಿಕರು ಇಲ್ಲಿ ಕ್ರೀಡಾಂಗಣ ನಿರ್ಮಿಸದಂತೆ ವಿನಂತಿಸಿದ್ದಾರೆ. ಸದ್ಯ ಕಾಮಗಾರಿ ತಡೆಹಿಡಿಯಲು ಸೂಚನೆ ನೀಡಿದ್ದೇನೆ.
ಯು.ಟಿ.ಖಾದರ್ , ದ.ಕ ಜಿಲ್ಲಾ ಉಸ್ತುವಾರಿ ಸಚಿವರು

ಸಚಿವರ ಸೂಚನೆ ಮೇರೆಗೆ ಸದ್ಯ ಕಾಮಗಾರಿ ನಿಲ್ಲಿಸಲಾಗಿದೆ. ಕಬಡ್ಡಿ ಕ್ರೀಡಾಂಗಣವನ್ನು ಇಲ್ಲಿಂದ ಸ್ಥಳಾಂತರ ಮಾಡುವ ಪ್ರಸ್ತಾವನೆಯೂ ಇದೆ. ಸೂಕ್ತ ಜಾಗ ಆಯ್ಕೆ ಮಾಡಿ ಅಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು.
ಕೆ.ಭಾಸ್ಕರ್, ಮೇಯರ್, ಮಂಗಳೂರು ಮಹಾ ನಗರ ಪಾಲಿಕೆ