ರಾಜಾಶ್ರಯದಲ್ಲಿ ಆರಂಭವಾದ ಕಂಬಳಕ್ಕೆ ರಾಜಕಾರಣದ ನಂಟು


ವಿಜಯಕುಮಾರ್ ಕಂಗಿನಮನೆ
ಕಂಬಳ ಆರಂಭವಾಗಿದ್ದೇ ರಾಜಾಶ್ರಯದಲ್ಲಿ. ಅರಸರ ಕಾಲದಲ್ಲಿ ಸಂಪ್ರದಾಯ-ಮನರಂಜನೆಯಾಗಿ ಹುಟ್ಟಿಕೊಂಡ ಕಂಬಳಕ್ಕೀಗ ಸರ್ಕಾರಗಳ ಆಶ್ರಯವಿದೆ. ಆದಿಯಿಂದಲೂ ಕಂಬಳ ಮತ್ತು ಆಡಳಿತಕ್ಕೆ ಅವಿನಾಭಾವ ನಂಟಿರುವುದು ಶ್ರುತ. ಈಗಿನ ರಾಜಕಾರಣದಲ್ಲೂ ಇದು ಮುಂದುವರಿದಿದೆ.

ಕಂಬಳದ ಆಕರ್ಷಣೆ ಇತರೆಲ್ಲ ಕ್ರೀಡೆಗಳಿಗಿಂತ ಮಿಗಿಲಾದುದು, ಜಾತಿ, ಧರ್ಮಾತೀತವಾದುದು. ಕಂಬಳ ಹಲವರಿಗೆ ರಾಜಕೀಯ ಬಲವನ್ನೂ ನೀಡಿದೆ. ಇಲ್ಲಿನ ರಾಜಕಾರಣಿಗಳಿಗೂ ಕಂಬಳದ ಮೇಲೆ ಅಪಾರ ಪ್ರೀತಿ. ಅವರವರ ಕ್ಷೇತ್ರಗಳಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸದ ಜನಪ್ರತಿನಿಧಿಯೇ ಇರಲಾರ. ಅದೇ ರೀತಿ ಕಂಬಳ ಉಳಿಸುವ ಹೋರಾಟದಲ್ಲೂ ಅವಿರತ ಶ್ರಮಿಸಿರುವುದನ್ನು ಮರೆಯುವಂತಿಲ್ಲ. ಈ ನಡುವೆ, ಕಂಬಳಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಮಾಡಿದ್ದೇನು ಎಂಬ ಕಡೆಗೊಂದು ಕಿರುನೋಟ.

* ಬಂಟ್ವಾಳ ಕಾವಳಕಟ್ಟೆಯ ಮೂಡೂರು ಪಡೂರು ಕಂಬಳದಲ್ಲಿ ಬಿ.ರಮಾನಾಥ ರೈ ದೊಡ್ಡ ಹೆಸರು ಮಾಡಿದ್ದರು. ರೈಗಳು ಕೋಣ ಸವಾರಿ ಮಾಡುವ ಚಿತ್ರವನ್ನು ವಿರೋಧಿಗಳು ಟೀಕಿಸಲು ಬಳಸುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದರು. ಕಾಲಾನುಕ್ರಮದಲ್ಲಿ ಈ ಕಂಬಳ ನಿಂತುಹೋಯಿತು.

* ಕಾರ್ಕಳ ಮತ್ತು ಮೂಡುಬಿದಿರೆ ಕಂಬಳಗಳ ಸಮಿತಿಗಳಿಗೆ ಹಾಲಿ ಶಾಸಕರೇ ಅಧ್ಯಕ್ಷರು ಎಂಬ ನಿಯಮವಿದೆ. ಈ ಕಂಬಳಗಳು ಆರಂಭವಾಗುವಲ್ಲಿ ಆಗ ಶಾಸಕರಾಗಿದ್ದ ಗೋಪಾಲ ಭಂಡಾರಿ ಮತ್ತು ಅಭಯಚಂದ್ರ ಜೈನ್ ಪಾತ್ರ ಹಿರಿದು.

* ವಿನಯಕುಮಾರ್ ಸೊರಕೆ ಪುತ್ತೂರು ಕಂಬಳದ ಗೌರವಾಧ್ಯಕ್ಷರಾಗಿ ದ.ಕ. ಜಿಲ್ಲೆಯಲ್ಲಿ ಹೆಸರು ಗಳಿಸಿ ಉಡುಪಿ ಕ್ಷೇತ್ರಕ್ಕೆ ಬಂದು ಸಂಸದರೂ ಆದರು.

* ಬೈಲುಮೇಗಿನ ಮನೆ ನಾಗರಾಜ ಶೆಟ್ಟಿ ಕಂಬಳ ಕೋಣಗಳ ಯಜಮಾನರಾಗಿ ಪ್ರಸಿದ್ಧಿ ಪಡೆದು ಶಾಸಕರಾಗಿ ಮಂತ್ರಿಯೂ ಆದರು.
* ಅಭಯಚಂದ್ರ ಜೈನ್ ಶಾಸಕರಾದ ಪ್ರಥಮ ಅವಧಿಯಲ್ಲೇ ಮೂಡುಬಿದಿರೆ ಕಂಬಳ ಸಂಘಟಿಸಿ ನಿರಂತರ 4 ಬಾರಿ ಶಾಸಕರಾದರು. ಯುವಜನ ಸೇವಾ ಸಚಿವರಾದ ಸಂದರ್ಭ ಕಂಬಳ ಸಾಧಕರು, ಓಟಗಾರರಿಗೆ ಕ್ರೀಡಾರತ್ನ, ಏಕಲವ್ಯ ಪ್ರಶಸ್ತಿ ನೀಡಿದರು. ಇದುವರೆಗೆ 1 ಲಕ್ಷ ರೂ. ನಗದು ಸಹಿತ ಪ್ರಶಸ್ತಿ ನೀಡಿ ಏಳು ಮಂದಿಗೆ ಗೌರವಿಸಲಾಗಿದ್ದು, ಇದು ಮುಂದುವರಿದಿದೆ.

* ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಕಕ್ಯಪದವು ಕಂಬಳದ ಗೌರವಾಧ್ಯಕ್ಷರಾಗಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.

* ಕ್ರೀಡೆ ಮತ್ತು ಯುವಜನ ಸೇವಾ ಸಚಿವರಾಗಿದ್ದಾಗ ಕೆ.ಗಂಗಾಧರ ಗೌಡರು ಅಳದಂಗಡಿ ಕಂಬಳದಲ್ಲಿ ನಿವೃತ್ತ ಓಟಗಾರರಿಗೆ ಪಿಂಚಣಿ ವ್ಯವಸ್ಥೆ ಪ್ರಾರಂಭಿಸಿ, ಮೂವರಿಗೆ ನೀಡಲಾಗಿತ್ತು. ಅನಂತರ ಅದು ನನೆಗುದಿಗೆ ಬಿತ್ತು.

* 1992ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದಾಗ ದಸರಾ ಪ್ರಶಸ್ತಿ 1 ಲಕ್ಷ ರೂ. ನಗದು ಇಬ್ಬರಿಗೆ ನೀಡಿರುವುದು ಕಂಬಳ ಕ್ಷೇತ್ರಕ್ಕೆ ಸಂದ ಪ್ರಥಮ ಪ್ರಶಸ್ತಿ. ಮತ್ತೆ ಅದು ಮುಂದುವರಿಯಲಿಲ್ಲ.

* ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕಂಬಳ ಸಾಧಕರಿಗೂ ನೀಡಲಾಯಿತು. ಅದು ಇಬ್ಬರಿಗೆ ನೀಡಿದ ಬಳಿಕ ಮುಂದುವರಿಯಲಿಲ್ಲ.

* ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾದ ಸಂದರ್ಭ ಕಂಬಳಕ್ಕೆ ಬಜೆಟ್‌ನಲ್ಲೇ 1 ಕೋಟಿ ರೂ. ಅನುದಾನ ನೀಡಲಾಯಿತು. ಅದನ್ನು ಪಡೆಯುವಲ್ಲಿ ಹಿಂದೆ ಬಿದ್ದು 68 ಲಕ್ಷ ರೂ. ಈಗಲೂ ಕನ್ನಡ ಸಂಸ್ಕೃತಿ ಇಲಾಖೆಯಲ್ಲೇ ಬಾಕಿಯಾಗಿದೆ.

* ಸುನೀಲ್ ಕುಮಾರ್ ಕಾರ್ಕಳ ಶಾಸಕರಾಗಿ ಆಯ್ಕೆಯಾದ ಸಂದರ್ಭ ಶ್ರೀರಾಮುಲು ಮಿಯ್ಯರು ಕಂಬಳಕ್ಕೆ ಆಗಮಿಸಿದ್ದರು. ಆಗ ಕ್ರೀಡಾಂಗಣ ನಿರ್ಮಾಣಕ್ಕೆ 84 ಲಕ್ಷ ರೂ. ನೀಡಿದ್ದರು. ಕೋಟ ಶ್ರೀನಿವಾಸ ಪೂಜಾರಿ ಕರೆ ನಿರ್ಮಾಣಕ್ಕೆ 25 ಲಕ್ಷ ರೂ. ಮಂಜೂರು ಮಾಡಿದ್ದರು.

* ಕೇಂದ್ರ ಸಚಿವ ಸದಾನಂದಗೌಡರು ಕಂಬಳ ಹೋರಾಟ ಬೆಂಬಲಿಸಿ ಕೇಂದ್ರ ಸರ್ಕಾರದ ಪ್ರತಿ ಹಂತದ ಇಲಾಖೆಯ ಕೆಲಸಗಳನ್ನು ಮಾಡಿಸಿಕೊಟ್ಟರು. ಈಗಲೂ ಸುಪ್ರೀಂ ಕೋರ್ಟಿನಲ್ಲಿರುವ ವಿಚಾರಣೆಗೆ ಕಂಬಳ ಪರ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಚಿವ ಸಂಪುಟದ ಸದಸ್ಯರು, ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಯು.ಟಿ.ಖಾದರ್, ಸಂಸದರಾದ ನಳಿನ್‌ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾಗಿದ್ದ ಅಭಯಚಂದ್ರ ಜೈನ್ ಮತ್ತಿತರರು ಕಂಬಳದ ಹೋರಾಟ ಬೆಂಬಲಿಸಿದ ಪ್ರಮುಖರು.

ಇಂದು ಪುತ್ತೂರು ಕಂಬಳ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಬಂಗರಸರ ಕಾಲದಲ್ಲಿ ಕಂಬಳ ನಡೆಯುತ್ತಿತ್ತು ಎಂಬ ಉಲ್ಲೇಖಗಳು ಇತಿಹಾಸದಲ್ಲಿವೆ. 1993ರಲ್ಲಿ ಅಂದಿನ ಶಾಸಕ ವಿನಯಕುಮಾರ್ ಸೊರಕೆ ಗೌರವಾಧ್ಯಕ್ಷತೆಯಲ್ಲಿ ದಿ.ಜಯಂತ ರೈ ಅಧ್ಯಕ್ಷತೆಯಲ್ಲಿ ಈ ಕಂಬಳ ಪುನರಾರಂಭವಾಗಿತ್ತು. ಪ್ರಸಕ್ತ ‘ಜಯ ಕರ್ನಾಟಕ’ ಸ್ಥಾಪಕ ಮುತ್ತಪ್ಪ ರೈ ಸಾರಥ್ಯದಲ್ಲಿ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಘಟಿಸಲಾಗುತ್ತಿದ್ದು, 26ನೇ ವರ್ಷದ ಕಂಬಳ ಜ.19ರಂದು ನಡೆಯಲಿದೆ. ಈ ಕಂಬಳಕ್ಕೆ ಜಿಲ್ಲೆಯಲ್ಲಿ ವಿಶೇಷ ಸ್ಥಾನವಿದೆ.