ರಂಗಭೂಮಿಗೆ ಅಪ್ಪಚ್ಚ ಕವಿ ಕೊಡುಗೆ ಅಪಾರ


ವಿಜಯವಾಣಿ ಸುದ್ದಿಜಾಲ ವಿರಾಜಪೇಟೆ
ಕನ್ನಡ ರಂಗಭೂಮಿ ಉಚ್ಚ್ರಾಯ ಸ್ಥಿತಿಯಲ್ಲಿರುವ ಕಾಲಗಟ್ಟದ ಮುಂಚಿತವಾಗಿಯೇ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.


ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕನಕದಾಸರು ಮತ್ತು ಅಪ್ಪಚ್ಚಕವಿ ತೌಲನಿಕ ಅಧ್ಯಯನ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ಹಿಂದೆ ದಾರ್ಶನಿಕರು ಹರಹರಿ ಎಂದು ತಮ್ಮನ್ನು ಕರೆದು ಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಆದರೆ ಇಂದು ಹರಹರಿಯನ್ನು ನಾವು ಬೀದಿಗೆ ತಂದು ನಿಲ್ಲಿಸಿದ್ದೆವೆ. ಇಂದಿನ ಪರಿಸ್ಥಿತಿಯಲ್ಲಿ ಏಸು, ಅಲ್ಲಾ, ಹರಿ ಎಲ್ಲಾ ಒಂದೇ ಎಂದು ತೋರಿಸಲು ಚಿಂತನಾ ತತ್ವಗಳನ್ನು ಸಮಾಜದ ಮುಂದಿಡಬೇಕು. ಕನಕದಾಸರು ಅಸಮಾನತೆಯ ಸಮಾಜದಲ್ಲಿ ಹುಟ್ಟಿ, ಕಿರ್ತನೆಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳು ಇಂದಿಗೂ ಉಳಿದಿದೆ. ಅಪ್ಪಚ್ಚ ಕವಿ ನಾಟಕಕಾರನಾಗಿ, ಕವಿಯಾಗಿ, ಸಾಹಿತಿಯಾಗಿ ಕೊಡವ ಸಾಹಿತ್ಯಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.


ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕನಕದಾಸರು ಹಾಗೂ ಅಪ್ಪಚ್ಚ ಕವಿ ದಾಸ ಪರಂಪರೆಯ ಸಾಮ್ಯತೆ ಸೋಜಿಗವಾದದ್ದು ಎಂದು ಹೇಳಿದರು.


ಪ್ರಾಂಶುಪಾಲರಾದ ಡಾ.ಟಿ.ಕೆ.ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ.ಉಷಾ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಮಡಿಕೇರಿಯ ಪ್ರೊ.ಸಿದ್ದರಾಜು, ಡಾ.ಎಂ.ಕೆ. ಮಾಧವ, ನಾಗೇಶ್ ಕಾಲೂರು, ಗೋಣಿಕೊಪ್ಪದ ಡಾ.ಎಂ.ಪಿ ರೇಖಾ ಭಾಗವಹಿಸಿ ವಿಚಾರ ಮಂಡಿಸಿದರು.
ಅಮ್ಮುಣಿಚಂಡ ಪ್ರವೀಣ್, ಸ್ಮೀತಾ ಅಮೃತರಾಜ್, ಚೇಂದಿರ ನಿರ್ಮಲ ಬೋಪಣ್ಣ , ಡಾ ಕಾವೇರಿ ಪ್ರಕಾಶ್, ಕಿಗ್ಗಾಲು ಗಿರೀಶ್, ಡಾ ಡಿ.ಕೆ.ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಉಷಾ ಸ್ವಾಗತಿಸಿದರು.