More

    ಸುಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್‌ಗೆ ಗ್ಯಾರಂಟಿ ಇಲ್ಲ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ಸಿಗರಂತೆ ಸುಳ್ಳು ಹೇಳುವುದಿಲ್ಲ. ಪ್ರಣಾಳಿಕೆಯಲ್ಲಿ ತಿಳಿಸಿದ ಎಲ್ಲ ಭರವಸೆಗಳನ್ನು ಬಿಜೆಪಿ ಈಡೇರಿಸಲಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು. ತಾಲೂಕಿನ ಪೋಶೆಟ್ಟಿಹಳ್ಳಿಯಲ್ಲಿ ಮಂಗಳವಾರ ಮತಯಾಚನೆ ಮಾಡಿ, ಕ್ಷೇತ್ರದ ಎಲ್ಲ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಿಸಲಾಗಿದೆ. ಎಚ್‌ಎನ್ ವ್ಯಾಲಿ ಮೂಲಕ ಈ ಭಾಗದ ಎಲ್ಲ ಕೆರೆಗಳನ್ನೂತುಂಬಿಸಲಾಗಿದೆ. ಮಹಿಳೆಯರಿಗೆ ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಹಾಗೆಯೇ ಚುನಾವಣೆಗೆ ರಾಜ್ಯ ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯನ್ನು ಪವಿತ್ರಭಾವದಿಂದ ಕಾಣುತ್ತಿದ್ದು, ಬದ್ಧತೆಯಿಂದ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

    ಕಾಂಗ್ರೆಸ್‌ಗೆ ಗ್ಯಾರಂಟಿ ಇಲ್ಲದ ಸ್ಥಿತಿ ಇದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಕಾರ್ಡು ನೀಡುತ್ತಿರುವುದು ಹಾಸ್ಯಾಸ್ಪದ. 2013ರಿಂದ 2018ರವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಡಬೇಕಾಗಿದೆ ಎಂದರು. ಕಾಂಗ್ರೆಸ್ ನಿರಂತರವಾಗಿ ಯಾಮಾರಿಸುತ್ತಲೇ ಬಂದಿದೆ. ಇದರ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ಎಲ್ಲ ಮಹಿಳೆಯರ ಖಾತೆಯಲ್ಲಿ 10 ಸಾವಿರ ರೂಪಾಯಿ ಎಫ್‌ಡಿ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಮಾಜಿ ಶಾಸಕಿ ಅನಸೂಯಮ್ಮ ನಟರಾಜನ್ ಮತ್ತಿತರರು ಇದ್ದರು.

    ಟ್ರಬಲ್ ಎಂಜಿನ್ ಕೆಲಸ ಮಾಡಲ್ಲ: ಬಿಜೆಪಿಯದ್ದು ಡಬಲ್ ಎಂಜಿನ್ ಸರ್ಕಾರ. ಡಬಲ್ ಸ್ಪೀಡಿನಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿಸಿದೆ. ಕಾಂಗ್ರೆಸ್ ಟ್ರಬಲ್ ಎಂಜಿನ್ ಆಗಿರುವುದರಿಂದ ಪ್ರಗತಿ ಕುಂಠಿತವಾಗಲಿದೆ. ಐದು ವರ್ಷ ಆಡಳಿತ ನಡೆಸಿದಾಗ ಇಲ್ಲದ ಸದಾಶಿವ ಆಯೋಗದ ವರದಿಯ ನೆನಪು ಈಗ ಕಾಂಗ್ರೆಸ್‌ಗೆ ಬಂದಿರುವುದು ವಿಪರ್ಯಾಸ. ಕಳೆದ 60 ವರ್ಷದಿಂದ ಎಲ್ಲ ವರ್ಗದ ದಲಿತ ಸಮುದಾಯಗಳು, ಶೋಷಿತ ವರ್ಗದವರಿಗೆ ಅನ್ಯಾಯ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಸುಧಾಕರ್ ಆಗ್ರಹಿಸಿದರು.

    ಆಯುಷ್ಮಾನ್ ಭಾರತ್‌ಗೆ 10 ಲಕ್ಷ ರೂ.: ಬಿಪಿಎಲ್ ಕುಟುಂಬದಲ್ಲಿರುವ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಆರೋಗ್ಯಕ್ಕಾಗಿ ಪ್ರತಿ ವರ್ಷ 10 ಲಕ್ಷ ರೂಪಾಯಿ, ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂಪಾಯಿ, ಆರೋಗ್ಯ ವಿಮೆ ನೀಡಲಾಗುತ್ತದೆ. ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ 7 ರೂಪಾಯಿಗೆ ಹೆಚ್ಚಿಸಲಾಗುವುದು. ವಸತಿ ಯೋಜನೆಗಳಲ್ಲಿ ಪ್ರತಿ ಮನೆಗೆ 5 ಲಕ್ಷ ರೂಪಾಯಿ ಅನುದಾನ ನೀಡಲಿದೆ ಎಂದು ಭರವಸೆ ನೀಡಿದರು. 2013ರಿಂದ 2018ರವರೆಗೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನವರಿಗೆ ದಲಿತರು ನೆನಪಾಗಲಿಲ್ಲ. ಈಗ ಕನಿಕರ ಬಂದಿದೆ. ದಲಿತರ ವೋಟು ಪಡೆದು ಅವರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾಂಗ್ರೆಸ್ ಈಗ ಮತ್ತೆ ಯಾಮಾರಿಸಿ ದಲಿತರ ಮತ ಪಡೆಯಲು ಹುನ್ನಾರ ನಡೆಸುತ್ತಿದೆ ಎಂದು ಸುಧಾಕರ್ ಟೀಕಿಸಿದರು.

    ಸಕ್ಕರೆ ಕಾಯಿಲೆಗೆ ಅಕ್ಕಿ: ಕಳೆದ 60 ವರ್ಷದಿಂದ ಶೋಷಣೆಗೆ ಒಳಗಾದವರು ಈಗ ಶಾಪ ಹಾಕುತ್ತಿದ್ದಾರೆ, ಈ ಶಾಪ ಕಾಂಗ್ರೆಸ್‌ಗೆ ತಟ್ಟುತ್ತದೆ. ಐದು ಕೆಜಿ ಅಕ್ಕಿ ಬೆಲೆ 100 ರೂ. ಆದರೆ, ತಿಂಗಳಿಗೆ 600 ರೂಪಾಯಿ ಹಾಲು, ಜತೆಗೆ 5 ಕೆಜಿ ಅಕ್ಕಿಯೊಂದಿಗೆ 5 ಕೆಜಿ ಸಿರಿ ಧಾನ್ಯವನ್ನು ಬಿಜೆಪಿ ಸರ್ಕಾರ ನೀಡುತ್ತದೆ. ಅಕ್ಕಿ ಮಾತ್ರ ಕೊಟ್ಟರೆ ಸಕ್ಕರೆ ಕಾಯಿಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಲೇವಡಿ ಮಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅನ್ನ ಮಾತ್ರ ತಿನ್ನುತ್ತಾರಾ?, ಅವರು ಮಾತ್ರ ಆರೋಗ್ಯಕರ ಆಹಾರ ಸೇವಿಸಿ, ಬಡವರಿಗೆ ಅನ್ನ ಕೊಟ್ಟು ಆರೋಗ್ಯ ಕೆಡಿಸಲು ತೀರ್ಮಾನಿಸಿದ್ದಾರಾ? ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts