ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಳೆದ ಸೋಮವಾರ ಭಾರತ ತಂಡಗಳನ್ನು ಪ್ರಕಟಿಸಲಾಯಿತು. ಕನ್ನಡಿಗ ಕೆಎಲ್ ರಾಹುಲ್ ಅವರನ್ನು ನಿಗದಿತ ಓವರ್‌ಗಳ ತಂಡದ ಉಪನಾಯಕನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಕೆಲ ಮಾಜಿ ಕ್ರಿಕೆಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದರಲ್ಲೂ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾತ್ರ ಐಪಿಎಲ್ ನಿರ್ವಹಣೆಯೇ ಆಯ್ಕೆ ಮಾನದಂಡವಾದಂತಿದೆ ಎಂದು ರಾಹುಲ್ ಆಯ್ಕೆ ಕುರಿತು ಆಯ್ಕೆ ಸಮಿತಿಗೆ ಕಟುಕಿದ್ದರು. ಮಂಜ್ರೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್, ನೀವು ಬಾಂಬೆಯಿಂದ (ಮುಂಬೈ) ಆಚೆಗೆ ಸ್ವಲ್ಪ ಯೋಚಿಸಿ ಎಂದು ಹೇಳಿದ್ದಾರೆ.
ಸಂಜಯ್ ಮಂಜ್ರೇಕರ್ ಸ್ವಲ್ಪ ಬಾಂಬೆಯಿಂದ ಹೊರಗೆ ಯೋಚಿಸಬೇಕು. ತಂಡದ ಆಯ್ಕೆ ವಿಷಯದಲ್ಲಿ ನಾವು ತಟಸ್ಥರಾಗುತ್ತೇವೆ. ಆದರೆ ಮಂಜ್ರೇಕರ್ ಮಾತ್ರ ಬಾಂಬೆ ಸುತ್ತವೇ ತಿರುಗುತ್ತಾರೆ. ಮಂಜ್ರೇಕರ್‌ರಂಥ ವ್ಯಕ್ತಿಗಳು ಬಾಂಬೆ…ಬಾಂಬೆ..ಬಾಂಬೆ ಅಂತಾನೇ ಯೋಚನೆ ಮಾಡುತ್ತಾರೆ. ಅದರಾಚೆಗೂ ಯೋಚಿಸಬೇಕು ಎಂದಿದ್ದಾರೆ. ಮಂಜ್ರೇಕರ್ ಯಾವಾಗಲೂ ಇಂಥದ್ದೇ ಯೋಚನೆ ಎಂದು ಶ್ರೀಕಾಂತ್ ತಿರುಗೇಟು ನೀಡಿದ್ದಾರೆ.
ಉಪನಾಯಕನ ಸ್ಥಾನಕ್ಕೆ ರಾಹುಲ್ ಆಯ್ಕೆ ಸೂಕ್ತವಾಗಿದೆ. ಆಸ್ಟ್ರೇಲಿಯಾದಲ್ಲೇ ಪದಾರ್ಪಣೆ ಮಾಡಿ ಶತಕ ಸಿಡಿಸಿದ್ದರು. ವೇಗಿಗಳ ಬೌಲಿಂಗ್‌ಗೆ ಅವರೊಬ್ಬ ಉತ್ತಮ ಬ್ಯಾಟ್ಸ್‌ಮನ್ ಎಂದು ರಾಹುಲ್ ಆಯ್ಕೆಯನ್ನು ಶ್ರೀಕಾಂತ್ ಸಮರ್ಥಿಸಿಕೊಂಡರು.