More

    ಹಾರ ಹಾಕುವುದಕ್ಕೂ ಕೆಲವರಿಂದ ಅಡಿ: ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಬೇಸರ

    ಮಂಡ್ಯ: ಸೋಲು ಮುಂದಿನ ಗೆಲುವಿನ ಮೆಟ್ಟಿಲು ಎಂಬಂತೆ ನಮ್ಮ ಪ್ರಯತ್ನವನ್ನು ಮುಂದುವರಿಸೋಣ ಎಂದು ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಹೇಳಿದರು.
    ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸ್ವಾಭಿಮಾನಿ ಪಡೆ ವತಿಯಿಂದ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಬಸರಾಳು ಸೇರಿದಂತೆ ಕೆಲವೆಡೆ ನನಗೆ ಹೆಚ್ಚಿನ ಪ್ರಚಾರ ನೀಡುವುದಕ್ಕೆ ತಡೆಯೊಡ್ಡಿದರು. ಹಾರ ಹಾಕುವುದಕ್ಕೂ ವಿರೋಧಿಗಳು ತಡೆಯನ್ನುಂಟು ಮಾಡಿದರು. ಆದರೂ ಯುವ ಮಿತ್ರರು ಅದೆಲ್ಲವನ್ನೂ ಬದಿಗೊತ್ತಿ ನನ್ನ ಜತೆ ನಿಂತರು. ತಾಲೂಕಿನ ಉಮ್ಮಡಹಳ್ಳಿಯಲ್ಲಿ ಹೆಣ್ಣು ಮಗುವೊಂದು ತನ್ನ ಗೋಲಕದಲ್ಲಿ ಕೂಡಿಟ್ಟ ಹಣವನ್ನು ನನಗೆ ಕೊಟ್ಟಿದ್ದು ಸೇರಿದಂತೆ ಹಲವಾರು ಘಟನೆಗಳನ್ನು ನಾನು ಎಂದಿಗೂ ಮರೆಯಲಾರೆ. ಎಲ್ಲರೊಂದಿಗೆ ಇದೇ ರೀತಿಯ ಸಂಬಂಧ ಇದ್ದೇ ಇರುತ್ತದೆ ಎಂದು ಹೇಳಿದರು.
    ನನ್ನ ರಾಜಕೀಯ ಗುರು ಎಂ.ಶ್ರೀನಿವಾಸ್ ಅವರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅವರ ನೇತೃತ್ವದಲ್ಲಿ ನಾವೆಲ್ಲರೂ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸೋಲು-ಗೆಲುವು ಮುಖ್ಯವಲ್ಲ. ನಾವು ಚುನಾವಣೆಯಲ್ಲಿ ಭಾಗವಹಿಸಿದ್ದು, ನಮಗೆ ಜನತೆ ಅತೀವ ಪ್ರೀತಿ ತೋರಿದ್ದು ಮುಖ್ಯ. ಗಂಟಗೌಡನಹಳ್ಳಿಯಲ್ಲಿ ಪ್ರಾರಂಭ ಮಾಡಿದ ಚುನಾವಣಾ ಪ್ರಚಾರ ಇಡೀ ಕ್ಷೇತ್ರದಾದ್ಯಂತ ತುಂಬಾ ಚೆನ್ನಾಗಿಯೇ ನಡೆಯಿತು. ಕೆಲವು ಕಡೆಗಳಲ್ಲಿ ಯುವಕರು, ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಚುನಾವಣಾ ಪ್ರಚಾರವನ್ನು ವಿಜೃಂಭಣೆಯಿಂದಲೇ ಮಾಡಿದರು. ತಾಯಂದಿರು, ಅಕ್ಕಂದಿಯರು ಕಣ್ಣೀರುಹಾಕಿ ಈತನಿಗೆ ಹಣದ ಕೊರತೆ ಇದೆ. ಅದಕ್ಕೆ ನಾವೂ ಸಹಾಯ ಮಾಡಬೇಕು ಎಂದು ಹೋದಲೆಲ್ಲ ಹಣವನ್ನೂ ಕೊಟ್ಟು ಆಶೀರ್ವದಿಸಿದರು ಎಂದು ಚುನಾವಣಾ ಪ್ರಚಾರದ ದಿನಗಳನ್ನು ಮೆಲುಕು ಹಾಕಿದರು.
    ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಸೋಲು ಗೆಲುವಿನ ಸೋಪಾನ. ನಾನೂ ಸಹ ಎರಡು ಸಲ ಸೋತಿದ್ದೇನೆ. ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಹೋರಾಟ ಮಾಡಬೇಕಿದೆ. ನಾನು ರೈತ ಸಂಘದ ವತಿಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ವೇಳೆ ಕೇವಲ 15 ಸಾವಿರ ಮತಗಳನ್ನು ಪಡೆದಿದ್ದೆ. ಕಾಂಗ್ರೆಸ್‌ನವರು 25 ಮತ ಪಡೆದಿದ್ದರು. ನಂತರ ನಡೆದ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷದಿಂದ ಸೋಲುಂಡಿದ್ದೇನೆ. ಸಾಮಾನ್ಯ ರೈತ ಕುಟುಂಬದ ಮಗನೊಬ್ಬ ಮಂಡ್ಯಕ್ಕೆ ಬಂದು ಚುನಾವಣೆ ಎದುರಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಬಳಿಕ ನಡೆದ ಚುನಾವಣೆಯಲ್ಲಿ ನಾನು ಗೆದ್ದು ಶಾಸಕನಾದೆ. ಅದೇ ರೀತಿ ವಿಜಯಾನಂದ ಅವರೂ ಸಹ ಸೋಲಿನಿಂದ ಧೃತಿಗೆಡದೆ ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಹಾದಿಯಲ್ಲಿ ಸಾಗಿ ಮತ್ತೊಮ್ಮೆ ಎದ್ದು ನಿಲ್ಲಬೇಕು ಎಂದು ಸಲಹೆ ನೀಡಿದರು.
    ಜಿ.ಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮುಖಂಡರಾದ ಎಂ.ಲೋಕೇಶ್, ತಿಮ್ಮೇಗೌಡ, ಜಯಶೀಲ, ಬೋರೇಗೌಡ, ಸಿದ್ದರಾಜು, ಪೂರ್ಣಾನಂದ, ಕೃಷ್ಣೇಗೌಡ, ವಿಶಾಲ್‌ರಘು, ಆನಂದ್, ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts