ಆಪರೇಷನ್ ಕಳಂಕ ಸ್ಪೀಕರ್ ಭಾವುಕ

ಬೆಂಗಳೂರು: ‘ನನ್ನ ಮೇಲಿರುವ ಈ 50 ಕೋಟಿ ರೂಪಾಯಿ ಕಸದ ಬುಟ್ಟಿಯನ್ನು ಅತಿ ಶೀಘ್ರದಲ್ಲೇ ಕೆಳಗಿಳಿಸಿಕೊಳ್ಳಲು ಹಾಗೂ 15 ದಿನಗಳ ನಂತರ ನಾನು ಈ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಬಯಸುತ್ತೇನೆ’ ಎಂದು ಸ್ಪೀಕರ್ ರಮೇಶ್​ಕುಮಾರ್ ಭಾವುಕರಾಗಿ ಹೇಳಿದರು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಳಂಕದ ವಿಚಾರವನ್ನೇ ಪ್ರಸ್ತಾಪಿಸಿದ ಸ್ಪೀಕರ್, ಸಿಎಂ ಶುಕ್ರವಾರ 12.10ಕ್ಕೆ ನನಗೆ ಪತ್ರ ರವಾನಿಸಿದ್ದಾರೆ. ಅದರಲ್ಲಿ ಆಡಿಯೋ ತುಣುಕಿನ ಸಿಡಿ ಕೂಡ ಕಳುಹಿಸಿದ್ದರು. ಅದರಲ್ಲಿ ವ್ಯಕ್ತಿಯೊಬ್ಬರು ನನ್ನ ಹೆಸರು ಉಲ್ಲೇಖಿಸಿದ್ದು, ಪ್ರಧಾನಿಯವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಆ ಧ್ವನಿ ಯಾರದು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ನನಗೆ 50 ಕೋಟಿ ರೂ. ನೀಡಿರುವುದಾಗಿ ಹೇಳಿದ್ದಾರೆ. ಈ ಮಾತು ಕೇಳಿ ನನಗೆ ಬೇಸರವಾಯಿತು. ಈ ಆರೋಪದಿಂದಾಗಿ ಎರಡು ದಿನ ನಿದ್ದೆ ಇಲ್ಲದೆ ಕಳೆದಿದ್ದೇನೆ, ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದೇನೆ ಎಂದರು.

ನಾನು ಶಾಸನಸಭೆಗೆ ಗೌರವಪೂರ್ವಕ ವಾಗಿ ಆಯ್ಕೆಯಾಗಿದ್ದೇನೆ. ಈವರೆಗೆ ನನ್ನ ಮೇಲೆ ಇಂಥಾ ಆಪಾದನೆ ಬರುವಂತೆ ಎಂದೂ ನಡೆದುಕೊಂಡಿಲ್ಲ. ಆದರೆ, ನನ್ನನ್ನು ದುಡ್ಡು ತೆಗೆದುಕೊಂಡಿರುವಂತೆ ಆಡಿಯೋದಲ್ಲಿ ಬಿಂಬಿಸಿರುವುದು ನೋವು ತಂದಿದೆ ಎಂದು ವಿಷಾದಿಸಿದರು.

‘ನನ್ನ ಪುರಾಣ ಹೇಳಲು ಸದನದ ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ, ನಿಮಗೆ ನನ್ನ ನೋವು ಹೇಳಿಕೊಳ್ಳಬೇಕು. ನನ್ನ ಹೆಸರು ಪ್ರಸ್ತಾಪ ಆಗಿರುವ ವಿಷಯ ತಿಳಿದು ಬಹಳ ನೊಂದುಕೊಂಡೆ. ಮನೆಯವರಿಗೆ ಗೊತ್ತಾಗಬಾರದೆಂದು ಕಳೆದೆರಡು ದಿನದ ಹಿಂದೆ ರೈಲಿನಲ್ಲಿ ರಾಯಚೂರಿಗೆ ಹೋಗಿ, ರಸ್ತೆ ಮೂಲಕ ವಾಪಸ್ ಬಂದೆ. ಯಾರೋ ಹಾದಿ ಬೀದಿಯಲ್ಲಿ ಹೋಗುವವರು ಮಾತನಾಡಿದ್ದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಮಾತನಾಡಿದ್ದಾರೆ. ಈ ಹಿಂದೆ ಇಂಥದ್ದೇ ಪ್ರಕರಣದಲ್ಲಿ ಪಾಲ್ಗೊಂಡವರು ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ ಎಂದರು. ‘ನನ್ನ ಚಾರಿತ್ರ್ಯವಧೆ ಮಾಡಿದರೆ ಸಾವಿಗಿಂತ ಹೆಚ್ಚು ಕ್ರೌರ್ಯ ಆಗುತ್ತದೆ’ ಎಂದು ವಾಜಪೇಯಿ ಅವರು ಲೋಕಸಭೆಯಲ್ಲಿ ಹೇಳಿದ್ದರು. ಹಾಗೆಂದು ನಾನು ವಾಜಪೇಯಿ ಅವರೊಂದಿಗೆ ಹೋಲಿಸಿಕೊಳ್ಳುತ್ತಿಲ್ಲ. ನಾನು ವಾಜಪೇಯಿ ಕಾಲಿನುಗುರಿನ ಧೂಳಿಗೆ ಸಮ. ಈ ರೀತಿ ಆಪಾದನೆ ಬರುವಂತೆ ನಾನು ಎಂದೂ ನಡೆದುಕೊಂಡಿಲ್ಲ’ ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿಬಂತು. ನನಗೆ ಹಣ ನೀಡಿದ್ದಾಗಿ ಪ್ರಸ್ತಾಪ ಮಾಡಿದ್ದಾರೆ. ಅವರು ನನಗೆ ನೇರವಾಗಿ ಭೇಟಿಯಾಗಿದ್ದರೇ? ಅಥವಾ ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರೇ? ಯಾವಾಗ ಕೊಟ್ಟರು? ಹೇಗೆ ಕೊಟ್ಟರು? ಯಾವ ಡಿನಾಮಿನೇಷನ್​ನಲ್ಲಿ ಕೊಟ್ರು ಎಂದು ಪ್ರಶ್ನಿಸಿದರು.

ದೊಮ್ಮಲೂರು ಅಮರಜ್ಯೋತಿ ಬಡಾವಣೆಯಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಅಕ್ಕಪಕ್ಕದವರಿಗೆ ನನ್ನಿಂದ ತೊಂದರೆಯಾಗದಂತೆ ಮನೆ ಬಳಿ ಜನ ಬರಬಾರದೆಂದು ಬೋರ್ಡ್ ಕೂಡ ಹಾಕಿಲ್ಲ. ಅಂತಹದರಲ್ಲಿ ಇಷ್ಟು ದೊಡ್ಡ ಆರೋಪ ನನ್ನ ಮೇಲೆ ಮಾಡಲಾಗಿದೆ. ಅಷ್ಟು ಪ್ರಮಾಣದ ಹಣವನ್ನು ನಾನೆಲ್ಲಿ ಇಟ್ಟುಕೊಳ್ಳಲಿ ಎಂದರು.

ಇದೇ ವೇಳೆ ತಾಯಿ ಮಾತನ್ನು ನೆನಪಿಸಿಕೊಂಡ ಅವರು, ಉಳ್ಳವರ ಮನೆಗೆ ಹೋದರೆ ವಾಪಸ್ ಬರುವಾಗ ಮನೆ ಹೊಸ್ತಿಲಲ್ಲಿ ಕಾಲು ಕೊಡವಿ ಬಾ ಎಂದಿದ್ದರು. ನಾನು ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ಬದುಕುತ್ತಿದ್ದೇನೆ ಎಂದು ಹೇಳುವಾಗ ಅವರ ಕಣ್ಣಾಲಿ ತುಂಬಿಸಿಕೊಂಡವು. ಈ ಆರೋಪ ಇಟ್ಟುಕೊಂಡು ಈ ಸ್ಥಾನದಲ್ಲಿ ಕೂರುವುದಕ್ಕೆ ಬೇಸರ ವಾಗುತ್ತದೆ. ನನ್ನ ಮೇಲೆ ಆರೋಪ ಎಸಗಿದ ಶಾಸಕರು ಸದನದಿಂದ ಹೊರಹೋಗಬೇಕು, ಇಲ್ಲವಾದಲ್ಲಿ ನಾನು ರಾಜೀನಾಮೆ ನೀಡಬೇಕು ಎಂದು ಖಡಕ್ಕಾಗಿ ಹೇಳಿದರು.

ಎಸ್​ಐಟಿಗೆ ಇಂದೂ ವಿರೋಧ

ಆಡಿಯೋ ಕುರಿತು ತನಿಖೆ ನಡೆಸಲು ಎಸ್​ಐಟಿ ರಚನೆ ವಿರೋಧಿಸುವ ಕಾರ್ಯವನ್ನು ಮಂಗಳವಾರವೂ ಮುಂದುವರಿಸುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸೋಮವಾರ ಇಡೀ ದಿನ ಸದನದ ಒಳ-ಹೊರಗೆ ಆಡಿಯೋ ಕುರಿತು ಪ್ರತಿಕ್ರಿಯೆ ನೀಡದೆ ಗಂಭೀರವಾಗಿದ್ದ ಬಿಎಸ್​ವೈ, ಸಂಜೆ ವೇಳೆಗೆ ಮೌನ ಮುರಿದಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶಾಸಕರ ಜತೆಗಿನ ಚರ್ಚೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವ್ಯಕ್ತಿಯೊಬ್ಬರನ್ನು ರಾತ್ರಿ ವೇಳೆ ಕಳಿಸಿಕೊಟ್ಟು ರೆಕಾರ್ಡ್ ಮಾಡಿಸಿ, ಬಜೆಟ್ ದಿನವೇ ಸುದ್ದಿಗೋಷ್ಠಿ ನಡೆಸಿರುವವರು ಕುಮಾರಸ್ವಾಮಿ. ಅವರ ಅಧೀನದ ಅಧಿಕಾರಿ ತನಿಖೆ ಬಗ್ಗೆ ನಮ್ಮ ಪಕ್ಷದ ಶಾಸಕರು ಹಾಗೂ ರಾಜ್ಯದ ಜನರಿಗೆ ನಂಬಿಕೆಯಿಲ್ಲ. ಸಿಎಂ ಕೈಕೆಳಗೆ ತನಿಖೆ ಬೇಡ ಎಂಬುದು ನಮ್ಮ ಅಪೇಕ್ಷೆಯೇ ಹೊರತು ತನಿಖೆಯಿಂದ ಓಡಿ ಹೋಗುತ್ತಿಲ್ಲ. ಸದನ ಸಮಿತಿ ಅಥವಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲು ತಿಳಿಸಿದ್ದೇವೆ. ತರಾತುರಿಯಲ್ಲಿ ತನಿಖೆ ಬೇಡ ಎಂದು ನಾಳೆಯೂ ಸ್ಪೀಕರ್​ಗೆ ನಮ್ಮ ನಿಲುವು ಸ್ಪಷ್ಟಪಡಿಸುತ್ತೇವೆ ಎಂದರು.

25 ವರ್ಷಗಳ ನಂತರ ಪ್ರತಿಧ್ವನಿಸಿದ ಕದ್ದಾಲಿಕೆ

ವಿಧಾನಸಭೆಯಲ್ಲಿ ಟೆಲಿಫೋನ್ ಕದ್ದಾಲಿಕೆಯ ಟೇಪ್ ಹಗರಣ ಎರಡೂವರೆ ದಶಕಗಳ ಹಿಂದೆ ಹೊರಬಿದ್ದಾಗ ಅಂದಿನ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ನ್ಯಾಯಾಂಗ ತನಿಖೆ ನಡೆಸಿದ ಪ್ರಕರಣ ಸೋಮವಾರ ವಿಧಾನಸಭೆಯಲ್ಲಿ ಮತ್ತೊಮ್ಮೆ ಪ್ರತಿಧ್ವನಿಸಿತು. ಜನತಾ ಪರಿವಾರದ ನಾಯಕರಾದ ಎಚ್.ಡಿ.ದೇವೇಗೌಡ ಹಾಗೂ ಅಜಿತ್ ಸಿಂಗ್ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಸಿಎಂ ಹೆಗಡೆ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಾಗ ಸಿಎಂ ಹುದ್ದೆಗೆ ರಾಜಿನಾಮೆ ನೀಡಿದ್ದ ಹೆಗಡೆ, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್ ಸದನದಲ್ಲಿ ಪ್ರಸ್ತಾಪಿಸಿದರು. ಆಗ ಅದೇ ವಿಚಾರ ಪಟ್ಟು ಹಿಡಿದ ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ಟೆಲಿಫೋನ್ ಕದ್ದಾಲಿಕೆ ಹಗರಣವನ್ನು ನ್ಯಾಯಮೂರ್ತಿ ಕುಲದೀಪ್ ಸಿಂಗ್ ನೇತೃತ್ವದ ಆಯೋಗ ತನಿಖೆ ನಡೆಸಿದ ಮಾದರಿಯಲ್ಲೇ ಈಗಲೂ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಸ್ವತಃ ನನ್ನ ಮೇಲೆ ಆರೋಪ ಕೇಳಿ ಬಂದಿರುವುದರಿಂದ ಬಹಳಷ್ಟು ದಿನ ಈ ಆರೋಪ ಎದುರಿಸಿ ಸುಮ್ಮನಿರಲಾರೆ. 15 ದಿನಗಳಲ್ಲಿ ಇತ್ಯರ್ಥ ಆಗಬೇಕು ಎಂಬ ಉದ್ದೇಶದಿಂದ ಎಸ್​ಐಟಿ ರಚನೆಗೆ ಸರ್ಕಾರವನ್ನು ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬಿಎಸ್​ವೈ ಮನೆಗೆ ರೇವಣ್ಣ ಬಂದಿದ್ದೇಕೆ?

ಕಾಂಗ್ರೆಸ್ ನಾಯಕರ ಕಿರುಕುಳದಿಂದ ಬೇಸತ್ತ ಸಚಿವ ಎಚ್.ಡಿ.ರೇವಣ್ಣ ಅವರು ತಮ್ಮೊಂದಿಗೆ ಸರ್ಕಾರ ರಚನೆಗೆ ಕೈಜೋಡಿಸಿ ಎಂದು ಮನವಿ ಮಾಡಲು ಬಿ.ಎಸ್. ಯಡಿಯೂರಪ್ಪ ಮನೆಗೆ ಬಂದಿದ್ದರು. ಈ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

ಆಡಿಯೋ ಸಂಭಾಷಣೆ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಎಸ್​ಐಟಿ ತನಿಖೆಗೆ ರೇಣುಕಾಚಾರ್ಯ ವಿರೋಧಿಸಿ, ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ 40 ಕೋಟಿ ರೂ. ಆಮಿಷ ಒಡ್ಡಿದ ಸಿಡಿಯನ್ನು ಸದನದಲ್ಲಿ ಪ್ರದರ್ಶಿಸಿದರು. ಈ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕು ಎಂದು ಸ್ಪೀಕರ್ ರಮೇಶ್​ಕುಮಾರ್ ಅವರಿಗೆ ಸಿಡಿ ಹಸ್ತಾಂತರಿಸಿದರು. ಕಾಂಗ್ರೆಸ್ ನಾಯಕರು ಸಿಎಂಗೆ ನೀಡುತ್ತಿರುವ ತೊಂದರೆಯಿಂದ ಮನನೊಂದು ಬಿಎಸ್​ವೈ ಮನೆಗೆ ರೇವಣ್ಣ ಬಂದಿದ್ದರು. ಸರ್ಕಾರ ಪತನಕ್ಕೆ ಸಂಚು ನಡೆದ ಬಗ್ಗೆ ತನಿಖೆ ನಡೆಸುವುದಾದರೆ ಈ ವಿಚಾರವನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.

ನೀವು ನಿಷ್ಕಳಂಕ ರಾಜಕಾರಣಿ. ನಿಮ್ಮ ಮೇಲೆ ಯಾವ ಆಪಾದನೆ ಬಂದರೂ ನಾವು ನಂಬುವುದಿಲ್ಲ. ಇಡೀ ಪ್ರಕರಣದ ಹಿನ್ನೆಲೆ ಬಗ್ಗೆಯೂ ತನಿಖೆಯಾಗಬೇಕು.

| ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಯಾರು ಏನೆಂದರು?

ಸರ್ಕಾರ ತನಿಖೆ ನಡೆಸಿದಲ್ಲಿ ನ್ಯಾಯ ಸಿಗುವುದಿಲ್ಲ. ನಮಗೂ ಅನುಮಾನ ಶುರುವಾಗುತ್ತದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ನಾವೇ ಮಾಡಿಸಿದ್ದು ಎಂದು ಹೇಳಿದವರೇ ಎಸ್​ಐಟಿ ತನಿಖೆಗೆ ತಂಡ ರಚಿಸುತ್ತಾರೆಂದರೆ, ಏನು ಹೇಳಬೇಕು?

| ಗೋವಿಂದ ಕಾರಜೋಳ, ಬಿಜೆಪಿ ಶಾಸಕ

ಊಹೆ ಮೇಲೆ ಗಾಳಿಗೆ ಗುದ್ದು ಹಾಕುವುದು ಬೇಡ. ಈ ಆಡಿಯೋ ನಕಲಿಯೋ ಅಸಲಿಯೋ ಎಂಬುದು ಮೊದಲು ತನಿಖೆ ಅಗಬೇಕು.

| ಕೆ.ಎಸ್.ಈಶ್ವರಪ್ಪ ಬಿಜೆಪಿ ಶಾಸಕ

ಇತ್ತೀಚಿನ ಬೆಳವಣಿಗೆಗಳಿಂದ ಜನ ನಮ್ಮನ್ನು ಕಳ್ಳರು ಕಳ್ಳರು ಎಂದು ಕರೆಯುವಂತಾಗಿದೆ. ಈ ಪ್ರಕರಣದ ಸಮಗ್ರ ತನಿಖೆಯಾಗಿ ತೀರ್ಪು ಬರಬೇಕಿದೆ.

| ಡಿ.ಕೆ.ಶಿವಕುಮಾರ್ ಸಚಿವ

ರಮೇಶ್​ಕುಮಾರ್ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ. ಅವರ ಮೇಲಿನ ಕಾಮೋಡ ಸರಿಯಬೇಕು. ಆರೋಪವನ್ನು ಸುಲಭವಾಗಿ ತಳ್ಳಿ ಹಾಕುವಂಥದ್ದಲ್ಲ. ಪ್ರಕರಣ ಕುರಿತು ಎಸ್​ಐಟಿ ತನಿಖೆ ಸೂಕ್ತ.

| ಸಿದ್ದರಾಮಯ್ಯ ಮಾಜಿ ಸಿಎಂ

1 ಆಡಿಯೋದಲ್ಲಿರುವುದು ನನ್ನ ಧ್ವನಿ ಅಂತ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದು ಬಿಟ್ಟರೆ, ಇಡೀ ಕಲಾಪದಲ್ಲಿ ಯಡಿಯೂರಪ್ಪ ಮೌನ

2 ಪ್ರತಿಪಕ್ಷದ ಪರ ಶಾಸಕ ಮಾಧುಸ್ವಾಮಿ ವಕಾಲತ್ತು, ಆಡಳಿತ ಪಕ್ಷಕ್ಕೆ ತೀಕ್ಷ್ಣ ಪ್ರತಿಕ್ರಿಯೆ

3 ಕಲಾಪದಲ್ಲಿ ಸಮರ್ಥನೆ ಮಾಡಿಕೊಳ್ಳದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ವಿರುದ್ಧ ಬಿಎಸ್​ವೈ ಅಸಮಾಧಾನ

4 ಈ ವಿಚಾರದಲ್ಲಿ ಚರ್ಚೆ ಮಾಡದ ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಸ್ಪೀಕರ್, ‘ನನ್ನ ಮೇಲಿನ ಆರೋಪವನ್ನು ನೀವು ನಂಬಿದ್ದೀರಾ’ ಎಂದು ಮಾತನಾಡುವಂತೆ ಕರೆ

5 ತಮ್ಮ ಬಗ್ಗೆ ಗೌರವದ ಮಾತನ್ನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪನವರಿಗೆ ಕೃತಜ್ಞತೆ ಅರ್ಪಿಸಿದ ಸ್ಪೀಕರ್.

ವ್ಯಭಿಚಾರ ಸರಿ, ಆ ಬಗ್ಗೆ ಮಾತಾಡೋದು ತಪ್ಪಾ?

ಬೆಂಗಳೂರು: ಆಪರೇಷನ್ ಆಡಿಯೋ ಸಂಭಾಷಣೆ ಸಚಿವ ಕೃಷ್ಣಬೈರೇಗೌಡ ಹಾಗೂ ಬಿಜೆಪಿ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.

ಸ್ಪೀಕರ್ ರಮೇಶ್​ಕುಮಾರ್ ಅವರು ‘ಯಾವ ರೀತಿಯ ತನಿಖೆ ಎಂಬ ನಿರ್ಧಾರವನ್ನು ಸಿಎಂ ಕೈಗೊಳ್ಳುತ್ತಾರೆ’ ಎಂದಾಗ, ಬಿಜೆಪಿಯ ಮಾಧುಸ್ವಾಮಿ, ‘ಸಿಎಂ ಕೂಡ ತಪ್ಪಿತಸ್ಥರಲ್ಲಿ ಒಬ್ಬರು. ಅವರಡಿ ತನಿಖೆ ನಡೆಯುವುದು ಬೇಡ. ಬೇಕಿದ್ದರೆ ನ್ಯಾಯಾಂಗ ತನಿಖೆಯಾಗಲಿ’ ಎಂದರು. ಆಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ನಿಮ್ಮ ಘನತೆ ಕಡಿಮೆ ಮಾಡಿದವರು ಮುಖ್ಯಮಂತ್ರಿಗಳೇ ಹೊರತು ನಾವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಪೀಕರ್, ನಾನಿರುವ ಸಂಕಟ ಸಂದರ್ಭದಲ್ಲಿ ನ್ಯಾಯಾಂಗ ತನಿಖೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯ ಜಗದೀಶ ಶೆಟ್ಟರ್, ಈ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಪ್ರಕರಣದಲ್ಲಿ ಸಿಎಂ ಚಿತಾವಣೆಯಿದೆ. ಸರ್ಕಾರಕ್ಕೆ ತನಿಖೆಯ ಅಧಿಕಾರ ಕೊಡುವುದರಿಂದ ದುರ್ಬಳಕೆ ಸಾಧ್ಯತೆಯಿದೆ ಎಂದರು. ಬಸವರಾಜ ಬೊಮ್ಮಾಯಿ ಮಾತನಾಡಿ, ಆಡಿಯೋ ಬಿಡುಗಡೆ ಮತ್ತು ಆ ಸಂದರ್ಭದಲ್ಲಿ ಆಡಿರುವ ಮಾತುಗಳಿಂದ ಸಿಎಂ ಉದ್ದೇಶ ಏನು ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಚುಚ್ಚಿದರು.

ಅದಕ್ಕೆ ಸ್ಪೀಕರ್, ‘ಹಾಗಿದ್ದರೆ ಆಡಿಯೋದಲ್ಲಿ ಮಾತನಾಡಿರುವವರ ಉದ್ದೇಶ ಏನು’ ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯವರ ಮಾತನ್ನು ಕೇಳಿದರೆ ಕಳ್ಳತನ, ವ್ಯಭಿಚಾರ ಸರಿ, ಅದರ ಬಗ್ಗೆ ಮಾತನಾಡುವುದು ತಪ್ಪು ಎಂಬಂತಿದೆ’ ಎಂದು ಮಾತಿನ ಚಾಟಿ ಬೀಸಿದರು. ಆಗ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗಲಾಟೆ ನಡೆದು ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಆಗ ಸ್ಪೀಕರ್ ಅರ್ಧಗಂಟೆ ಸದನವನ್ನು ಮುಂದೂಡಿದರು.