ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕೆ.ಆರ್.ಪೇಟೆ.: ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ರೈತ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗ್ರಾಮದ ಅಂಜನಿಗೌಡ ಎಂಬುವರ ಪುತ್ರ ಜಯಕುಮಾರ್(44) ನೇಣಿಗೆ ಶರಣಾದ ರೈತ. ಜಯಕುಮಾರ್ ತಮ್ಮ ಆರು ಎಕರೆಯಲ್ಲಿ ಕೃಷಿ ಮಾಡಲು ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದರು. ಜಮೀನಿನಲ್ಲಿ ಬಾಳೆ ಹಾಕಿದ್ದರು. ಕೊಳವೆ ಬಾವಿಗಳಲ್ಲಿ ನೀರಿಲ್ಲದರಿಂದ ಹೊಸ ಕೊಳವೆ ಬಾವಿಗಳನ್ನು ಸಾಲ ಮಾಡಿ ಕೊರೆಸಿದ್ದರು. ಅವುಗಳಲ್ಲೂ ನೀರು ಬರದ ಕಾರಣ ಸಾಲ ಹೆಚ್ಚಾಗಿತ್ತು. ಕೋಯ್ಲಿಗೆ ಬಂದಿದ್ದ ಬಾಳೆ ನೀರಿಲ್ಲದೇ ಒಣಗುತ್ತಿತ್ತು.

ಸಾಲಗಾರರು ಹಣ ನೀಡುವಂತೆ ಒತ್ತಾಯಿಸುತ್ತಿದ್ದರಿಂದ ಶುಕ್ರವಾರ ಮುಂಜಾನೆ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಕುಟುಂಬದ ಸದಸ್ಯರು ಬೆಳಗ್ಗೆ ಎದ್ದು ನೋಡಿದಾಗ ವಿಷಯ ತಿಳಿದಿದೆ. ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ ಅನಿತಾ, ಪುತ್ರ, ಪುತ್ರಿ ಇದ್ದಾರೆ.