ಬಿಜೆಪಿ ಫ್ಲೆಕ್ಸ್, ಬ್ಯಾನರ್ ತೆರವು

ಕೆ.ಆರ್.ನಗರ: ಚುನಾವಣಾ ಪ್ರಚಾರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮನದ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಬಿಜೆಪಿ ಮುಖಂಡರು ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ಮಂಡ್ಯ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಕೆ.ಆರ್.ನಗರ ಪಟ್ಟಣಕ್ಕೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಬಿಜೆಪಿ ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಪಟ್ಟಣದಾದ್ಯಂತ ಪ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು.
ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿ ಕಸ ಸಾಗಿಸುವ ವಾಹನದಲ್ಲಿ ಕೊಂಡೊಯ್ದು ಕಚೇರಿಯ ಶೆಡ್‌ನಲ್ಲಿ ಇರಿಸಿದರು.

ಚುನಾವಣಾ ಆಯೋಗ ಚುನಾವಣೆಯ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಅನುಮತಿ ಪಡೆಯದೆ ಪ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಿದಂತೆ ಆದೇಶ ಹೊರಡಿಸಿದ್ದರೂ ಬಿಜೆಪಿ ಮುಖಂಡರು ನಿಯಮ ಉಲ್ಲಂಘಿಸಿದ್ದಾರೆ.

ಚುನಾವಣಾ ನಿಯಮ ಮತ್ತು ನೀತಿಸಂಹಿತೆ ಉಲ್ಲಂಘಿಸಿದ್ದರೂ ಪುರಸಭಾ ಅಧಿಕಾರಿಗಳಾಗಲಿ ಅಥವಾ ಚುನಾವಣಾಧಿಕಾರಿಯವರಾಗಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಇತರೆ ಪಕ್ಷಗಳ ಮುಖಂಡರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ವತಿಯಿಂದ ಯಾವುದೇ ಅನುಮತಿ ಪಡೆಯದೆ ಪ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ನಮ್ಮ ಗಮನಕ್ಕೆ ಬಂದ ತಕ್ಷಣವೇ ಅವುಗಳನ್ನು ತೆರವುಗೊಳಿಸಿ ವಶಪಡಿಸಿಕೊಂಡಿದ್ದೇವೆ. ಈ ಬಗ್ಗೆ ತಾಲೂಕು ಚುನಾವಣಾಧಿಕಾರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಕೆ.ಶಿವಣ್ಣ, ಪುರಸಭಾ ಮುಖ್ಯಾಧಿಕಾರಿ, ಕೆ.ಆರ್.ನಗರ.