ಕನಿಷ್ಠ ಸೌಲಭ್ಯದಲ್ಲೇ ಗುಣಮಟ್ಟದ ಚಿಕಿತ್ಸೆ

ಮೈಸೂರು: ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ನಗರದ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿರುವ ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡು ನಿರೀಕ್ಷೆಗೂ ಮೀರಿ ದಾಖಲಾಗುವ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಶ್ರೀನಿವಾಸ್ ಮತ್ತು ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ರಾಧಮಣಿ ತಿಳಿಸಿದರು.
ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಆಸ್ಪತ್ರೆಗಳಿದ್ದರೂ ಅಲ್ಲಿಗೆ ಹೋಗದ ರೋಗಿಗಳು ಪ್ರತಿಯೊಂದು ಕಾಯಿಲೆಗೂ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗೆ ಧಾವಿಸುತ್ತಾರೆ. ಹೀಗಾಗಿ, ಆಸ್ಪತ್ರೆ ಮತ್ತು ಇಲ್ಲಿನ ವೈದ್ಯರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದರು.
ಹೀಗೆ ಬಂದವರನ್ನ ವಾಪಸ್ ಕಳುಹಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಬೆಡ್‌ಗಳು ಇಲ್ಲದಿದ್ದರೂ ಹೇಗೋ ಸ್ಥಳಾವಕಾಶ ಕಲ್ಪಿಸಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಆಸ್ಪತ್ರೆಯಲ್ಲಿ ಅಪಘಾತ, ಬೆಂಕಿ ಅವಘಡ, ವಿಷ ಸೇವನೆ ಸೇರಿ ಇತರ ತುರ್ತು ರೋಗಿಗಳಿಗೆ ಪರಿಪೂರ್ಣವಾಗಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆದ್ದರಿಂದ ಕೆಮ್ಮು, ಜ್ವರ, ನೆಗಡಿ, ಕಿವಿನೋವು ಸೇರಿ ಸಣ್ಣಪುಟ್ಟ ರೋಗಗಳನ್ನು ಪ್ರಾಥಮಿಕ, ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲೇ ತೋರಿಸಿಕೊಳ್ಳಬೇಕು. ಸ್ಥಳೀಯವಾಗಿ ಶಿಫಾರಸು ಮಾಡಿದ ಹಾಗೂ ಇತರ ತುರ್ತು ರೋಗಿಗಳು ಮಾತ್ರ ಇಲ್ಲಿಗೆ ಬಂದರೆ ಪರಿಣಾಮಕಾರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದರು.
ಸರ್ಕಾರ ತಾಲೂಕು, ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಿ, ತಜ್ಞ ವೈದ್ಯರನ್ನು ನಿಯೋಜನೆ ಮಾಡಬೇಕು. ಇದರಿಂದ ನಮ್ಮ ದೊಡ್ಡಾಸ್ಪತ್ರೆ ಮೇಲೆ ಈಗ ಬೀಳುತ್ತಿರುವ ಹೆಚ್ಚಿನ ಒತ್ತಡ ಕಡಿಮೆಯಾಗಿ, ಬರುವ ಎಲ್ಲ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.