ಯಡಿಯೂರಪ್ಪ ಆಶೀರ್ವಾದ ಸಿಕ್ಕಿದೆ

ಹಾಸನ: ಮೂರು ದಿನಗಳ ಹಿಂದೆಯೇ ಯಡಿಯೂರಪ್ಪ ಆಶೀರ್ವಾದ ಸಿಕ್ಕಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಜತೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು ಅದನ್ನೂ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು. ನಗರದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕೀಯ ನಿಂತ ನೀರಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಇರಬೇಕಾಗುತ್ತದೆ ಎನ್ನುವ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದರು.

ಹಾಸನ ಕ್ಷೇತ್ರದಿಂದ ಎಚ್.ಡಿ. ದೇವೇಗೌಡ ಸ್ಪರ್ಧಿಸಿದರೆ ನನ್ನ ದೇನೂ ಅಭ್ಯಂತರವಿಲ್ಲ. ಆದರೆ, ಕುಟುಂಬ ರಾಜಕಾರಣಕ್ಕೆ ನಾನು ಬೆಂಬಲ ನೀಡುವುದಿಲ್ಲ. ದೇವೇಗೌಡರು ದೊಡ್ಡ ಮನಸ್ಸು ಮಾಡಿ ನಮಗೂ ಅವಕಾಶ ಕಲ್ಪಿಸಬೇಕು. ಮೊಮ್ಮಕ್ಕಳನ್ನು ರಾಜಕೀಯ ದಲ್ಲಿ ಈಗಿನಿಂದಲೇ ಮುನ್ನೆಲೆಗೆ ತರುವುದು ಸರಿಯಲ್ಲ ಎಂದರು.

ದೇವೇಗೌಡರಿಗೆ ಪತ್ರ: ಏನೂ ಇಲ್ಲದ ಸಂದರ್ಭದಲ್ಲಿ ದೇವೇಗೌಡರಿಗೆ ಮಾಜಿ ಶಾಸಕ ದಿ.ಹನುಮೇಗೌಡ ಹಾಗೂ ನಾನು ನೆರವಾಗಿದ್ದೇವೆ. 1991ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು 3 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. ಈಗ ಮೊಮ್ಮಕ್ಕಳ ಬದಲು ನಮಗೆ ನೆರವು ನೀಡಬಹುದಲ್ಲವೇ? ಪ್ರಸ್ತುತ ಲೋಕಸಭೆ ಚುಣಾವಣೆ ಸಂಬಂಧ ದೇವೇಗೌಡರಿಗೆ ಪತ್ರವೊಂದನ್ನು ಬರೆದಿದ್ದು, ಎರಡು ದಿನಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದರು.

ಬಿಎಸ್​ವೈ ಜತೆ ಚರ್ಚೆ: ಬಿ.ಎಸ್.ಯಡಿಯೂರಪ್ಪ ಜತೆಗೆ ಮೂರು ಬಾರಿ ಚರ್ಚೆ ನಡೆಸಿದ್ದೇನೆಯೇ ಹೊರತು ಬಿಜೆಪಿ ಹೈಕಮಾಂಡ್ ಜತೆಗೆ ಯಾವುದೇ ಮಾತುಕತೆ ನಡೆದಿಲ್ಲ. ಪ್ರಜ್ವಲ್ ಬದಲು ದೇವೇಗೌಡರೇ ಸ್ಪರ್ಧಿಸಿದರೆ ನನಗೆ ಖುಷಿ ಎಂದರು.