ಸತ್ಯವನ್ನು ಜನರೇ ತಿಳಿಯಬೇಕಿದೆ

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಬಾಕಿಯಿದೆ?. ಅಂಬರೀಷ್ ಅವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಪಕ್ಷೇತರ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟು ಸತ್ಯ ಎಂಬುದನ್ನು ಜನರೇ ತಿಳಿದುಕೊಳ್ಳಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಳಿದುಕೊಂಡಿರುವುದೆಂದರೆ ಅದು ಕಾವೇರಿ ಸಮಸ್ಯೆ ಮಾತ್ರ. ಅದರ ಬಗ್ಗೆ ಅವರಿಗೆ ಏನು ತಿಳಿದಿದೆ ಎಂಬುದು ನನಗೆ ಗೊತ್ತಿಲ್ಲ. ಇದಲ್ಲದೆ ಕಾವೇರಿ ನದಿ ಪಾತ್ರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಮೇಕೆದಾಟು ಯೋಜನೆಗೂ ಕೂಡ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ ಎಂದರು.

ಕಳೆದ ಹಲವಾರು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿರುವ ಕಾವೇರಿ ವಿವಾದವನ್ನು ಇತ್ಯರ್ಥ ಮಾಡಲು ನಾವು ಭಗೀರಥ ಪ್ರಯತ್ನ ಮಾಡುತ್ತಿದ್ದೇವೆ. ಹೀಗಿರುವಾಗ ಏನೂ ತಿಳಿಯದ ಅವರ ಕೈಯಲ್ಲಿ ಏನು ಮಾಡಲು ಸಾಧ್ಯವಾಗುತ್ತದೆ ಎಂದು ಪರೋಕ್ಷವಾಗಿ ಸುಮಲತಾ ಅವರಿಗೆ ಟಾಂಗ್ ನೀಡಿದರು.

ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಸಂಸದ ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಸದಸ್ಯೆ ಸುಕನ್ಯಾ ಹನುಮಂತೇಗೌಡ, ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಕಾರ್ಕಹಳ್ಳಿ ಬಸವೇಗೌಡ, ಮುಖಂಡ ಸಂತೋಷ್ ತಮ್ಮಣ್ಣ ಹಾಜರಿದ್ದರು.