ಬೆಂಗಳೂರು/ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸುವ ಕೆ.ಸಿ ವ್ಯಾಲಿ ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿದೆ.
ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿಯ ಕೆಲ ಸದಸ್ಯರ ಬಗ್ಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಯೋಜನೆ ಪ್ರಶ್ನಿಸಿ ಶಾಶ್ವತ ನೀರಾವರಿ ಯೋಜನೆ ಸಮಿತಿ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿಯ ಆರ್.ಆಂಜನೇಯ ರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕಳೆದ ವಿಚಾರಣೆ ವೇಳೆ, ತಜ್ಞರ ಸಮಿತಿಯ ಕೆಲ ಸದಸ್ಯರ ಬಗ್ಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಆ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಮಂಗಳವಾರ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು.
ಅದನ್ನು ಪರಿಶೀಲಿಸಿದ ಪೀಠ, ಅರ್ಜಿದಾರರು ತಜ್ಞರ ಸಮಿತಿ ಸದಸ್ಯರ ವಿರುದ್ಧ ಪೂರ್ವಗ್ರಹಪೀಡಿತ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ತಪ್ಪು ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿರುವ ಅರ್ಜಿದಾರರು, ಈ ಪ್ರಕರಣದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ. ಆದ್ದರಿಂದ, ನ್ಯಾಯಾಲಯವೇ ಇದನ್ನು ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿ ವಿಚಾರಣೆ ಮುಂದುವರಿಸಲಿದೆ ಎಂದು ಆದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಮಾಣಪತ್ರದಲ್ಲೇನಿದೆ?: ಕೆ.ಸಿ.ವ್ಯಾಲಿ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿಯ ಕೆಲ ಸದಸ್ಯರು ಮೂಲ ಯೋಜನೆ ಸಿದ್ಧಪಡಿಸಿದವರಾಗಿದ್ದಾರೆ. ಐಐಎಸ್‌ಸಿಯ ನಾಲ್ವರು ವಿಜ್ಞಾನಿಗಳು ಮೊದಲಿನಿಂದಲೂ ಯೋಜನೆಯ ಅನುಷ್ಠಾನದಲ್ಲಿ ಭಾಗವಹಿಸಿದ್ದಾರೆ. ಮತ್ತಿಬ್ಬರು ವಿಜ್ಞಾನಿಗಳು ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಮತ್ತೊಬ್ಬ ವಿಜ್ಞಾನಿ ನೇತೃತ್ವದಲ್ಲಿ ಐಐಎಸ್‌ಸಿ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಸಣ್ಣ ನೀರಾವರಿ ಇಲಾಖೆಯಿಂದ ಕಾರ್ಯಗತಗೊಂಡ ಕೆ.ಸಿ. ಮತ್ತು ಎಚ್.ಎನ್.ವ್ಯಾಲಿ ಯೋಜನೆಯನ್ನು ವಿನ್ಯಾಸಗೊಳಿಸಿದ್ದು, ಅದಕ್ಕಾಗಿ ಶೇ.50 ಹಣ ಸಂದಾಯವಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆ ಆಯ್ಕೆ ಮಾಡಿರುವ ಕೆಲ ವಿಜ್ಞಾನಿಗಳು ಪರೋಕ್ಷವಾಗಿ ಲಾಭದಾಯಕ ಪ್ರಯೋಜನಗಳನ್ನು ಪಡೆದಿರುವುದರಿಂದ, ಅಂತಹ ವಿಜ್ಞಾನಿಗಳು ಯೋಜನೆಯ ಪರಿಸರ ಪರಿಣಾಮಗಳ ಅಧ್ಯಯನ ನಡೆಸುವ ತಜ್ಞರ ಸಮಿತಿಯಲ್ಲಿದ್ದರೆ ಪಕ್ಷಪಾತವಾಗುತ್ತದೆ ಎಂದು ಅರ್ಜಿದಾರರು ಪ್ರಮಾಣಪತ್ರದಲ್ಲಿ ಆಕ್ಷೇಪಿಸಿದ್ದರು. ಅರ್ಜಿದಾರರ ಈ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.