ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಎನ್.ಆರ್.ಪುರ: ತಾಲೂಕಿನ ಕಳ್ಳಿಕೊಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಸಕಡ್ಡಿ ಕಂಡುಬಂದಿದ್ದು, ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗಾಗಿ ನೀಡಿರುವ ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಬರೀ ಕಸವೇ ಸಿಕ್ಕಿದೆ. ಪಡಿತರ ವಿತರಿಸುವ ಅಕ್ಕಿಯಲ್ಲಿ ಕಸ, ಕಡ್ಡಿ, ಕೋಳಿ ಪುಕ್ಕಗಳೇ ಇರುತ್ತವೆ. ಇದನ್ನು ಮನುಷ್ಯರಿರಲಿ ಪ್ರಾಣಿಗಳೂ ತಿನ್ನುವುದಿಲ್ಲ ಎಂದು ಕಳ್ಳಿಕೊಪ್ಪ ಗ್ರಾಮದ ಎಲಿಯಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಗುಣಮಟ್ಟದ ಅಕ್ಕಿ ವಿತರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪಡಿತರ ಅಕ್ಕಿಯ ಗುಣಮಟ್ಟ ಪರಿಶೀಲಿಸಿದ ನಂತರವೇ ವಿತರಿಸಬೇಕು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಗುಣಮಟ್ಟದ ಅಕ್ಕಿಯನ್ನೇ ವಿತರಿಸಲು ಎಲ್ಲ ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಲಾಗಿದೆ. ಕಳ್ಳಿಕೊಪ್ಪ ಅಂಗಡಿಯಲ್ಲಿ ವಿತರಿಸಿದ ಅಕ್ಕಿ ಗುಣಮಟ್ಟವಿಲ್ಲದಿದ್ದರೆ ಬೇರೆ ಅಕ್ಕಿ ವಿತರಿಸುವಂತೆ ಸೂಚಿಸಿದ್ದೇನೆ. ಯಾವುದೆ ನ್ಯಾಯಬೆಲೆ ಅಂಗಡಿಯಲ್ಲೂ ಗುಣಮಟ್ಟದ ಅಕ್ಕಿ, ಬೇಳೆ ಇಲ್ಲದಿದ್ದರೆ ನನ್ನ ಗಮನಕ್ಕೆ ತರುವಂತೆ ತಿಳಿಸಲಾಗಿದೆ ಎಂದು ಆಹಾರ ನಿರೀಕ್ಷಕ ಪಾಲಕ್ಷಪ್ಪ ತಿಳಿಸಿದ್ದಾರೆ.